ಭರತನಾಟ್ಯ ಎಂಎ ಪರೀಕ್ಷೆಯಲ್ಲಿ ವಿದುಷಿ ವಿದ್ಯಾ ಮನೋಜ್ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ
ಬಂಟ್ವಾಳ: ಅಣ್ಣಾಮಲೈ ವಿಶ್ವವಿದ್ಯಾಲಯ ಚಿದಂಬರಂ ತಮಿಳುನಾಡು,ನಡೆಸಿದ ಭರತನಾಟ್ಯ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ನ ನೃತ್ಯ ಗುರುಗಳಾದ ವಿದುಷಿ ವಿದ್ಯಾ ಮಾನೋಜ್ ಅವರು ಶೇ 80% ಅಂಕ ಪಡೆದು
ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.

ಕಳೆದ ಎರಡು ವರ್ಷಗಳಿಂದ ಅಣ್ಣಾಮಲೈ ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗದ ಮೂಲಕ ಮಾಸ್ಟರ್ ಆಫ್ ಸೈನ್ ಆರ್ಟ್ಸ್ (ಭರತನಾಟ್ಯ) ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.ಇವರು ಪುತ್ತೂರು ಫಿಲೋಮಿನಾ ಕಾಲೇಜಿನ 1997ಇಸವಿಯ ಬಿ.ಎಸ್ಸಿ ಪದವೀಧರೆ.
ದಿ| ಅಚ್ಯುತ ಬಲ್ಯಾಯ ಹಾಗೂ ಲಲಿತಾ ದಂಪತಿಗಳ ಸುಪುತ್ರಿಯಾಗಿರುವಂತಹ ಇವರು ಡಾ. ಮನೋಜ್ ಪಣಿಕ್ಕರ್ ಅವರ ಪತ್ನಿ.ವಿದ್ಯಾ ಇವರ ಪುತ್ರಿ ಡಾ. ಮಹಿಮಾ ಎಂ. ಪಣಿಕ್ಕರ್.
ವಿಶ್ವ ಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಅಂಡ್ ಕಲ್ಚರ್ ಪದಡ್ಕ,ಪುತ್ತೂರು ಇದರ ನಿರ್ದೇಶಕ ಕರ್ನಾಟಕ ಕಲಾಶ್ರೀ ದಿವಂಗತ ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ ಹಾಗೂ ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ ಇವರಲ್ಲಿ ನೃತ್ಯ ಶಿಕ್ಷಣವನ್ನು ಪಡೆದು ವಿದ್ವತ್ ಪದವಿಯನ್ನು ತಮ್ಮದಾಗಿಸಿಕೊಂಡರು.
ನಂತರ ಕಣ್ಣೂರಿನ ಲಾಸ್ಯ ಕಾಲೇಜ್ ಆಫ್ ಮ್ಯೂಸಿಕ್ ಆಂಡ್ ಡ್ಯಾನ್ಸ್ ಸಂಸ್ಥೆಯ ಪ್ರಾಂಶುಪಾಲ ಗುರು ಡಾ. ಲತಾ,ನೃತ್ಯ ಗುರು ದಿವಂಗತ ಬಿ.ಭಾನುಮತಿ ಯವರಲ್ಲಿ ಅಭಿನಯದ ಕುರಿತಂತೆ ಭರತನಾಟ್ಯದ ಹೆಚ್ಚಿನ ಶಿಕ್ಷಣವನ್ನುಪಡೆದುಕೊಂಡರು.
ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಕಲ್ಲಡ್ಕ ನೃತ್ಯಗುರು ವಿದುಷಿ ವಿದ್ಯಾ ಮನೋಜ್ ಇವರು ತಮ್ಮ ಕನಸಿನ ಕೂಸಾದ ಈ ನೃತ್ಯ
ಸಂಸ್ಥೆಯನ್ನು 2001ರಲ್ಲಿ ಪ್ರಾರಂಭಿಸಿ ಬೆಳ್ತಂಗಡಿ,ಕಲ್ಲಡ್ಕ,ಬಿ.ಸಿ.ರೋಡ್ ಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣವನ್ನು ಧಾರೆಯೆರೆಯುತ್ತಿದ್ದಾರೆ.
ಕಲಾನಿಕೇತನ ಸಂಸ್ಥೆಯ ಮೂಲಕ ಅನೇಕ ವಿದ್ಯಾರ್ಥಿಗಳು ವಿದ್ವತ್ ಪದವಿಯನ್ನು ಪಡೆದುಕೊಂಡಿದ್ದು,ಹಲವರು ರಂಗ ಪ್ರವೇಶ ಕಾರ್ಯಕ್ರಮವನ್ನು ಕೂಡ ಸಂಪನ್ನಗೊಳಿಸಿರುತ್ತಾರೆ.300ಕ್ಕೂ ಮಿಕ್ಕಿ ರಾಜ್ಯ ಹೊರ ರಾಜ್ಯಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದು ಪ್ರಶಂಸೆಗೆ ಒಳಗಾಗಿದ್ದಾರೆ.