ಅನಧಿಕೃತ ಗಾಂಜಾ ಮಾರಾಟ,ಸಾಗಾಟ ಮತ್ತು ಸೇವನೆಗೆ ಅವಕಾಶವಿಲ್ಲ: ಇನ್ಸ್ ಪೆಕ್ಟರ್ ಶಿವಕುಮಾರ್
ಬಂಟ್ವಾಳ: ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತ ಗಾಂಜಾ ಸಹಿತ ಮಾದಕ ವಸ್ತುಗಳ ಮಾರಾಟ,ಸಾಗಾಟ ಮತ್ತು ಸೇವನೆಯ ಪ್ರಕರಣ ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯ ನೂತನ ಇನ್ಸ್ ಪೆಕ್ಟರ್ ಶಿವಕುಮಾರ್ ಎಚ್ಚರಿಸಿದ್ದಾರೆ.

ಗುರುವಾರ ನಡೆಯಲಿರುವ ಈದ್ ಹಬ್ಬದ ಹಿನ್ನಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕೆಲವೆಡೆಯಲ್ಲಿ ಗಾಂಜಾ ಸೇವನೆ ಮಾಡುವ ಮಾಹಿತಿ ಲಭ್ಯವಾಗಿದ್ದು,ಇದು ಮುಂದುವರಿದರೆ ಇಲಾಖೆ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು.
ಸಮಾಜದ ಸ್ವಾಸ್ಥ್ಯ ವನ್ನು ಕಾಪಾಡುವ ನಿಟ್ಟಿನಲ್ಲಿ ಮಾದಕವಸ್ತುಗಳ ಸೇವನೆ,ಸಾಗಾಟ,ಮಾರಾಟ ಸಹಿತ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆದರು ಸಹಿಸಲಾಗದು,ಇಂತಹ ಚಟುವಟಿಕೆಗಳು ಕಂಡು ಬಂದರೆ ನೇರವಾಗಿ ಠಾಣೆಗೆ ಮಾಹಿತಿ ನೀಡುವಂತೆ ಅವರು ಕೋರಿದರು.
ಬಂಟ್ವಾಳದಲ್ಲಿ ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದು,ಈದ್ ಮಿಲಾದ್ ಅಥವಾ ಯಾವುದೇ ಹಬ್ಬ ಮತ್ತು ಕಾರ್ಯಕ್ರಮಗಳು ಶಾಂತಿಯುತ ಮತ್ತು ಸೌಹಾರ್ಧಯುತವಾಗಿ ನಡೆಸುವಂತಾಗಬೇಕು ಎಂದ ಅವರು ಹಬ್ಬದ ನೆಪದಲ್ಲಿ
ದ್ವಿಚಕ್ರ ವಾಹನದಲ್ಲಿ ರೈಡಿಂಗ್ ಮಾಡುವ ಯುವಕರಿಗೆ ಹಿರಿಯರು ಬುದ್ದಿ ಹೇಳುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮಾಂತರ ಎಸ್. ಐ.ಹರೀಶ್,ಅಪರಾಧ ವಿಭಾಗದ ಎಸ್.ಐ.ಮೂರ್ತಿ ಉಪಸ್ಥಿತರಿದ್ದರು.