ಬಿ.ಸಿ.ರೋಡು: ಶ್ರೀಗಣೇಶನ ಅದ್ದೂರಿ ಶೋಭಾಯಾತ್ರೆ
ಬಂಟ್ಚಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡು ಇದರ ಆಶ್ರಯದಲ್ಲಿ ಬಿ.ಸಿ.ರೋಡಿನ ಶ್ರೀರಕ್ತೇಶ್ವರೀ ದೇವಿ ಸನ್ನಿಧಿಯ ವಠಾರದಲ್ಲಿ 4 ದಿನಗಳ ಕಾಲ ಆರಾಧಿಸಲ್ಪಟ್ಟ 44 ನೇ ಸಾರ್ವಜನಿಕ ಶ್ರೀಗಣೇಶನ ಶೋಭಾಯಾತ್ರೆಯು ಶುಕ್ರವಾರ ಸಂಜೆ ಬಿ.ಸಿ.ರೋಡಿನ ರಾ.ಹೆಯಲ್ಲಿ ಅದ್ದೂರಿಯಾಗಿ ನಡೆಯಿತು.
ವಿಸರ್ಜನಾ ಪೂಜೆಯ ಬಳಿಕ ಉತ್ಸವ ಸ್ಥಳದಿಂದ ಹೊರಟ ಶ್ರೀಗಣೇಶನ ಶೋಭಾಯಾತ್ರೆ ತಲಪಾಡಿ ಗಣಪತಿ ಕಟ್ಟೆಯ ವರೆಗೆ ಸಾಗಿ ಅಲ್ಲಿಂದ ವಾಪಾಸ್ ಅದೇ ದಾರಿಯಾಗಿ ಬಂದು ಮಯ್ಯರ ಬೈಲು,ಭಂಡಾರಿಬೆಟ್ಟು,ಬಂಟ್ವಾಳ ನೆರೆ ವಿಮೋಚನಾ ರಸ್ತೆಯಾಗಿ ತೆರಳಿ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ನೇತ್ರಾವತಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.
ಬೆಳಿಗ್ಗೆ ಗಣಹೋಮ,ಮಧ್ಯಾಹ್ನ ಮಂಗಳಾರತಿಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯು ನಡಯಿತು.ಬಂಟ್ವಾಳ ಚಿಲಿಪಿಲಿ ಗೊಂಬೆ ಬಳಗದ ಕೀಲುಕುದುರೆ,ಯಕ್ಷಗಾನ ಗೊಂಬೆ,ಗೊಂಬೆಕುಣಿತ,ಸ್ಯಾಕ್ಸೋಪೋನ್,ಬ್ಯಾಂಡ್,ಚೆಂಡೆ ವಾದನ,ನಾಸಿಕ್ ಬ್ಯಾಂಡ್,ಹುಲಿವೇಷಗಳ ಅಬ್ಬರ,ವಿವಿಧ ಸಂಘ ಸಂಸ್ಥೆಗಳ ಸ್ತಬ್ದಚಿತ್ರ,ಟ್ಯಾಬ್ಲೋ,ಸುಡುಮದ್ದು ಪ್ರದರ್ಶನ ಶೋಭಾಯಾತ್ರೆಗೆ ವಿಶೇಷ ಮೆರಗು ನೀಡಿತು.ಪೈಬರ್ ಮೋಲ್ಡ್ ನ ವಿಭಿನ್ನ ವೇಷ ಭೂಷಣ,ಮಕ್ಕಳ ಕುಣಿತ ಭಜನೆ ಗಮನ ಸೆಳೆಯಿತು.
ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಎಂ.ಸತೀಶ್ ಭಂಡಾರಿ,ಪದಾಧಿಕಾರಿಗಳಾದ ಸುರೇಶ್ ಕುಮಾರ್ ಕೈಕಂಬ,ಎಂ.ಸತೀಶ್ ಶೆಟ್ಟಿ ಮೊಡಂಕಾಪು,ಭಾಸ್ಕರ ಟೈಲರ್, ಬಿ.ಮೋಹನ್,ಶ್ರೀಧರ ಶೆಣೈ,ಪುಪ್ಪರಾಜ್ ಶೆಟ್ಟಿ,ಲೋಕನಾಥ ಶೆಟ್ಟಿ,ರಾಜೇಶ್ ಎಲ್.ನಾಯಕ್,ದೇವದಾಸ ಶೆಟ್ಟಿ ಬಂಟ್ವಾಳ,ಪ್ರಮೋದ್ ಕುಮಾರ್ ಅಜ್ಜುಬೆಟ್ಟು ,ಗೋಪಾಲಸುವರ್ಣ,ಚರಣ್ ಜುಮಾದಿಗುಡ್ಡೆ ,ಬಸ್ತಿ ಸದಾಶಿವ ಶೆಣೈ ಮೊದಲಾದವರಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಸ್ತೆಯುದ್ದಕ್ಕು ಶೋಭಾಯತ್ರೆಯನ್ನು ಕಣ್ತುಂಬಿಕೊಂಡರು.ಬಂಟ್ವಾಳ ನಗರ ಪೊಲೀಸರು ಬಂದೋಬಸ್ತು ಏರ್ಪಡಿಸಿದ್ದರು.ರಕ್ತೇಶ್ವರೀ ಸನ್ನಿಧಿ ವಠಾರವನ್ನು ಸಂಪೂರ್ಣ ಕೇಸರಿಮಯಗೊಳಿಸಲಾಗಿತ್ತು.