ಗುರುಪುರದಲ್ಲಿ ʼಶ್ರೀ ಸುಧೀಂದ್ರ ಜ್ಞಾನ ಮಂದಿರʼ ನೂತನ ಕಟ್ಟಡದ ಉದ್ಘಾಟನೆ
ಕೈಕಂಬ: ಸಿಎ.ಮಧುಸೂದನ್ ಗುರುಪುರ ಅವರು ತಂದೆ ದಿ.ಲಕ್ಷ್ಮಣ ರಮಾನಾಥ ಪೈ ಸ್ಮರಣಾರ್ಥ ಒಟ್ಟು ನಾಲ್ಕು ಕೊಠಡಿಗಳ ಒಂದಂತಸ್ತಿನ ನೂತನ ಕಟ್ಟಡ ʼಶ್ರೀ ಸುಧೀಂದ್ರ ಜ್ಞಾನ ಮಂದಿರ’ವನ್ನು ಅಂದಾಜು 55 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿ ಗುರುಪುರದ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲಾ ವಿಭಾಗಕ್ಕೆ ಕೊಡುಯಾಗಿ ನೀಡಿದ್ದಾರೆ.
ಸೆ. ೧೯ರಂದು ಗುರುಪುರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ತಲೆ ಎತ್ತಿರುವ ಕಟ್ಟಡವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಭರತ್ ಶೆಟ್ಟಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬರುತ್ತದೆಯಾದರೂ,ಗುರುಪುರದಲ್ಲಿ ಸರ್ಕಾರಿ ಶಾಲೆಯೊಂದರ ಅಭಿವೃದ್ಧಿಗೆ ಸಾರ್ವಜನಿಕ ವಲಯದ ಚಾರ್ಟರ್ಡ್ ಅಕೌಂಟೆಂಟ್ ಮಧುಸೂದನ ಪೈ ಗುರುಪುರ ಅವರು ಇಷ್ಟೊಂದು ದೊಡ್ಡ ಪ್ರಮಾಣದ ಕೊಡುಗೆ ನೀಡಿರುವುದು ಅವರ ಶೈಕ್ಷಣಿಕ ಕಾಳಜಿಗೆ ಸಾಕ್ಷಿಯಾಗಿದೆ.ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಇಂತಹ ಸೇವಾ ತುಡಿತವಿದ್ದಾಗ ಮಾತ್ರ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಷ್ಟೇ ಸುಸಜ್ಜಿತವಾಗಿ ಬೆಳೆದು,ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆ ನೀಡಲು ಸಾಧ್ಯವಾಗುತ್ತದೆ ಎಂದರು.
ಮಧುಸೂದನ ಪೈ ಮಾತನಾಡಿ ಊರಿನ ಶಿಕ್ಷಣ ಕ್ಷೇತ್ರದ ಸೇವೆಯ ಮೂಲಕ ದೇಶ ಸೇವೆ ಆರಂಭಿಸಿದ್ದೇನೆ ಎಂಬ ಭಾವನೆ ನನ್ನದು. ಸ್ಥಿತಿವಂತರಾದ ಮೇಲೆ ಕಲಿತ ಶಾಲೆಯ ಸ್ಥಿತಿಗತಿಯತ್ತ ಕಣ್ಣಾಡಿಸಬೇಕು ಎಂಬುದು ನನ್ನ ಅಭಿಲಾಷೆ.ಊರಿನ ಮಕ್ಕಳಿಗಾಗಿ,ಊರಿಗಾಗಿ ಕೈಲಾದ ಸಹಾಯ ಮಾಡವವರಾಗಬೇಕು ಎಂದರು.
ಖಾಸಗಿ ಶಾಲೆಗಳನ್ನೇ ತೆರೆಯುವ ವರ್ತಮಾನದಲ್ಲಿ ಸರ್ಕಾರಿ ಶಾಲೆಯೊಂದರ ಅಭಿವೃದ್ಧಿಗೆ ಖಾಸಗಿ ವ್ಯಕ್ತಿಯೊಬ್ಬರು ದೊಡ್ಡ ಮಟ್ಟದಲ್ಲಿ ನೆರವಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ ಇದು ದೇವರು ಮೆಚ್ಚುವ ಕೆಲಸ ಎಂದು ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ಎಂ. ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗುರುಪುರ ಸರ್ಕಾರಿ ಪಿಯು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಶವಂತ ಆಳ್ವ ಮಾತನಾಡುತ್ತ ೧೯೫೮ರಲ್ಲಿ ಆರಂಭಗೊಂಡಿದ್ದ ಈ ಶಾಲೆಯ ಅಭಿವೃದ್ಧಿಗಾಗಿ ತಂದೆ ಪದ್ಮನಾಭ ಆಳ್ವರು ಆಪ್ತರನ್ನು ಒಗ್ಗೂಡಿಸಿಕೊಂಡು ಶ್ರಮಿಸಿದ್ದನ್ನು ನೆನಪಿಸಿಕೊಂಡರು.ಆ ಬಳಿಕ ಶಾಲಾ ಅಭಿವೃದ್ಧಿಗೆ ವೈಯಕ್ತಿಕ ನೆಲೆಯಲ್ಲಿ ಇದೀಗ ಮಧುಸೂದನ ಪೈ ದೊಡ್ಡ ಮೊತ್ತದ ಕಟ್ಟಡ ನಿರ್ಮಿಸಿ ಕೊಟ್ಟಿದ್ದಾರೆ.ಇದು ಖಾಸಗಿ ಶಾಲೆಗಳಿಗೆ ಸರಿಸಾಟಿಯಾಗಿ ಬೆಳೆದು ನಿಲ್ಲಬೇಕು ಎಂಬ ಕನಸು ತಂದೆಯವರದ್ದಾಗಿತ್ತು ಅದು ಇಂದು ಸಾಕಾರಗೊಳ್ಳುತ್ತಿದೆ ಇದರಲ್ಲಿ ಶಾಸಕರು ಹಾಗೂ ಕ್ಷೇತ್ರ ರಾಜಕೀಯ ನಾಯಕರ ಪಾತ್ರ ಸಾಕಷ್ಟಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುರುಪುರ ಶ್ರೀ ಸತ್ಯದೇವತಾ ಮಂದಿರದ ಧರ್ಮದರ್ಶಿ ಚಂದ್ರಕಾಂತ ಭಟ್ ಅವರು ಆಶೀರ್ವಚನ ನೀಡಿದರು.ಶಾಸಕ ಡಾ. ಭರತ್ ಶೆಟ್ಟಿ,ಸಿಎ ಮಧುಸೂದನ ಪೈ,ಗಜಾನನ ಪೈ,ಗುರುಪುರದ ಹೋಟೆಲ್ ಉದ್ಯಮಿ ಸುಧೀರ್ ಕಾಮತ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಗುರುಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್,ಶಿಕ್ಷಣ ಇಲಾಖೆಯ ಸಿಆರ್‌ಪಿ ಶೀಲಾವತಿ,ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪಾಂಡುರಂಗ ಪ್ರಭು ಹಾಗೂ ಗುರುಪುರ ಗ್ರಾಮ ಪಂಚಾಯತ್ ಸದಸ್ಯರು,ಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರು,ಶಿಕ್ಷಕೇತರ ವರ್ಗ,ಪ್ರಾಥಮಿಕ,ಪ್ರೌಢ ಶಾಲಾ ಎಸ್‌ಡಿಎಂಸಿ ಹಾಗೂ ಪಿಯು ಕಾಲೇಜು ಅಭಿವೃದ್ಧಿ ಸಮಿತಿ ಸರ್ವ ಸದಸ್ಯರು,ಶಾಲಾ ಮಕ್ಕಳು,ಮಕ್ಕಳ ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ಬಾಬು ಪಿ. ಎಂ. ಸ್ವಾಗತಿಸಿ,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಪ್ರಸ್ತಾವಿಸಿದರು.ಮಧುರಾಜ್ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.