ಪೊಳಲಿ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಇಂದು ಸೆ.೧೧ ಸೋಮವಾರದಂದು ತೆನೆಹಬ್ಬ ಆಚರಿಸಲಾಯಿತು. ಭಕ್ತಾದಿಗಳು ಬೆಳಗ್ಗೆ ಸಾವಿರ ಸೀಮೆಯ ಒಡತಿಯ ಸನ್ನಿಧಿಯಲ್ಲಿ ಬಂದು ತಾಯಿಗೆ ಅರ್ಪಣೆ ಮಾಡಿದ ತೆನೆಯನ್ನು ಸಾವಿರ ಸೀಮೆಯ ಭಕ್ತಾಧಿಗಳು ದೇವಳದಿಂದ ಮನೆಮನೆಗೆ ಕೊಂಡೊಯ್ದು ಪುದ್ದರ್ ಆಚರಣೆ ಮಾಡುವ ಪದ್ಧತಿ ಹಿಂದಿನಿಂದಲು ಬಂದ ಸಾಂಪ್ರದಾಯ.

ತಾವು ಬೆಳೆದ ಬೆಳೆಯ ಮೊದಲ ಫಸಲನ್ನು ತಾಯಿಗೆ ಅರ್ಪಿಸುವ ಮೂಲಕ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವುದು ನಮ್ಮ ಹಿರಿಯರು ಆಚರಿಸಿಕೊಂಡು ಬಂದಂತಹ ಆಚರಣೆ.
ದೇಶವನ್ನು ಅತಿವೃಷ್ಟಿ,ಅನಾವೃಷ್ಟಿಗಳು ಕಾಡದೇ ಇರಲಿ ಊರು ಸುಭೀಕ್ಷವಾಗಿರಲಿ ಎಂಬ ಉದ್ದೇಶ ಹಾಗೂ ಧನ್ಯತಾಭಾವನೆಯಿಂದ ಇಂದು ತಾಯಿಗೆ ಪೂಜಾ ಕೈಂಕರ್ಯಗಳನ್ನು ನಡೆಸಿ ತೆನೆಯನ್ನು ಸಮರ್ಪಿಸುತ್ತಾರೆ.
ದೇವಳದ ವರಾಂಗಣದಲ್ಲಿ ತೆನೆಯನ್ನು ಇಟ್ಟು ಅದನ್ನು ಪದಾರ್ಥಿಯೊಬ್ಬರು ಶಿರದಲ್ಲಿ ಹೊತ್ತು ತಂದು ಧ್ವಜಸ್ತಂಭದ ಬುಡದಲ್ಲಿ ಇಟ್ಟ ಬಳಿಕ ದೇವರ ಬಲಿ ಉತ್ಸವ ನಡೆಸುವ ಬ್ರಹ್ಮವಾಹಕ ಶಿರದಲ್ಲಿ ಹೊತ್ತು ದೇವಳದ ಸುತ್ತ ಪ್ರದಕ್ಷಿಣೆ ಬಂದು ತಾಯಿ ರಾಜರಾಜೇಶ್ವರಿಯ ಮಡಿಲಿನಲ್ಲಿರಿಸಿ ಪೂಜೆ ನೆರವೇರಿಸುತ್ತಾರೆ ಎಂದು ದೇವಳದ ಅರ್ಚಕ ಅನಂತ ಭಟ್ ವಿವರಿಸಿದರು.

ತಾಯಿ ಅನುಗ್ರಹಿಸಿದ ತೆನೆಯನ್ನು ಮನೆ ಹಾಗೂ ಊರಿನಲ್ಲಿ ಸುಖ,ಶಾಂತಿ,ನೆಮ್ಮದಿ,ಸಮೃದ್ಧಿ ಹಾಗೂ ತಾಯಿಯ ಕರುಣಾ ದೃಷ್ಟಿ ಸದಾ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚುತ್ತಾರೆ.

ತಾಯಿಗೆ ಹೊಸ ಫಸಲಿನಿಂದ ತಯಾರಿಸಿದ ನೈವೇದ್ಯವನ್ನು ಅರ್ಪಿಸುವುದು ಹಾಗೇ ಇಂದು ಭಕ್ತಾದಿಗಳಿಗೆ ಹಂಚಿದ ತಾಯಿಯ ಪ್ರಸಾದವನ್ನು ಮನೆಯ ಹೊಸ್ತಿಲಿಗೆ, ಮನೆಯ ತುಳಸಿ ಕಟ್ಟೆಯಲ್ಲಿ ಇಟ್ಟು ದೇವರ ಕೋಣೆಗೆ ಕಟ್ಟಿ ಉಳಿದ ಭತ್ತವನ್ನು ಕೈಯಲ್ಲೆ ಬಿಡಿಸಿ ಬೇಯಿಸಿದ ಅನ್ನದ ಜೊತೆ ಬೇಯಿಸಿ (ಪೊಸ ಅರಿತ ಒನಸ್‌ ) ಅನ್ನವನ್ನು ತಾಯಿಯ ಪ್ರಸಾದವೆಂದು ಸ್ವೀಕರಿಸುವುದು ತುಳುನಾಡಿನ ವಿಶೇಷ.

ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರರಾದ ಚೇರ ಸೂರ್ಯನಾರಾಯಣ ರಾವ್ , ದೇವಳದ ಅನುವಂಶಿಕ ಮೊಕ್ತೇಸರ ಪವಿತ್ರಪಾಣಿ ಮಾಧವ ಭಟ್, ನಾರಾಯಣ ಭಟ್, ಕೆ.ರಾಮ್ ಭಟ್, ಪರಮೇಶ್ವರ ಭಟ್ ದೇವಳದ ಅರ್ಚಕರು, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.

By suddi9

Leave a Reply

Your email address will not be published. Required fields are marked *