ಬಾಲ ಯೇಸು ದೇವಾಲಯದಲ್ಲಿ ತೆನೆಹಬ್ಬದ ಸಂಭ್ರಮ
ಬಂಟ್ವಾಳ: ಮೊಡಂಕಾಪು ಸಹಿತ ಬಂಟ್ವಾಳ ಸುತ್ತಮುತ್ತಲಿನ ವಿವಿಧ ಬಾಲಯೇಸು ದೇವಾಲಯದಲ್ಲಿ ಬಾಲ ಮಾರಿಯಮ್ಮನವರ ಹುಟ್ಟುಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.ಬಿ.ಸಿ.ರೋಡಿನ ಮೊಡಂಕಾಪು ಬಾಲ ಯೇಸು ದೇವಾಲಯದಲ್ಲಿ ಹುಟ್ಟು ಹಬ್ಬ ಸಂಭ್ರಮದಿಂದ ನಡೆಯಿತು.

ಇದರ ಪ್ರಯುಕ್ತ ಬಾಲ ಮಾರಿಯಮ್ಮನವರ ಪ್ರತಿಮೆಯ ಮೆರವಣಿಗೆಯು ಕಾಯಾರ್ಮಾರ್ ನಿಂದ ಆರಂಭಗೊಂಡು ಆಮ್ಟಾಡಿ,ನಲ್ಕೆಮಾರ್, ಏರ್ಯ ಮಾರ್ಗವಾಗಿ ಮೊಡಂಕಾಪು ಬಾಲ ಯೇಸು ದೇವಾಲಯ ತಲುಪಿತು.ಬಳಿಕ ಮರಿಯಮ್ಮನವರ ಗ್ರೋಟ್ಟೋ ಮುಂಭಾಗದಲ್ಲಿ “ಹೊಸ ತೆನೆ” ಯನ್ನು ವಿತರಿಸಲಾಯಿತು.

ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಮೆಲ್ವಿನ್ ಲೋಬೊ ಆಶೀರ್ವಚನಗೈದರು. ಬಾಲ ಯೇಸು ದೇವಾಲಯದಲ್ಲಿ ದೇವಾಲಯದ ಸಹಾಯಕ ಧರ್ಮಗುರು ರಾಹುಲ್ ಡೆಕ್ಸ್ಟರ್ ಡಿಸೋಜಾ ಶುಭವಾಚನಗೈದರು.ದೇವಾಲಯದ ಪ್ರಧಾನ ಧರ್ಮಗುರು ವಲೇರಿಯನ್ ಡಿಸೋಜ ದಿವ್ಯ ಬಲಿಪೂಜೆ ನಡೆಸಿ ನಾಡಿನ ಸಮಸ್ತ ಜನತೆಗೆ ಆರೋಗ್ಯ,ಸುಖ ಹಾಗೂ ಸಮೃಧ್ಧಿಯನ್ನು ಭಗವಂತನು ಕರುಣಿಸಲೆಂದು ಹಾರೈಸಿದರು.

ಅತಿಥಿಯಾಗಿ ಆಗಮಿಸಿದ ಧರ್ಮಗುರು ಮರ್ವಿನ್ ಫ್ರ್ಯಾಂಕ್ ಉಪಸ್ಥಿತರಿದ್ದರು.ಹಾಗೆಯೇ ಲೊರೆಟ್ಡೋಪದವು,ಆಗ್ರಾರ್,ಅಲ್ಲಿಪಾದೆ ದೇವಾಲಯದಲ್ಲು ತೆನೆಹಬ್ಬ ಸಂಭ್ರಮದಿಂದ ನಡೆಯಿತು.