ಕಲ್ಲಡ್ಕದಲ್ಲಿ ವೈಭವಪೂರ್ಣ ಮೊಸರು ಕುಡಿಕೆ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಮಂದಿರದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 91ನೇ ವರ್ಷದ ಮೊಸರು ಕುಡಿಕೆ ಉತ್ಸವವು ಗುರುವಾರ ಸಂಜೆ ರಾ.ಹೆ.ಯ ಕಲ್ಲಡ್ಕದಲ್ಲಿ ವೈಭವಪೂರ್ಣವಾಗಿ ಸಂಪನ್ನಗೊಂಡಿತು.
ಶ್ರೀ ರಾಮ ಮಂದಿರದಲ್ಲಿ ವೈಧಿಕ ವಿಧಿವಿಧಾನದ ಬಳಿಕ ಕಲ್ಲಡ್ಕದ ರಾ.ಹೆ.ಯಲ್ಲಿ ಶ್ರೀಕೃಷ್ಣನ ವೈಭವಯುತವಾದ ಶೋಭಾಯಾತ್ರೆ ನಡೆಯಿತು.

ಕಲ್ಲಡ್ಕ ಮಂದಿರದಿಂದ ಹೊರಟು ಕರಿಂಗಾನ ಕ್ರಾಸ್ ವರೆಗೆ ತೆರಳಿ ವಾಪಾಸ್ ಮಾರ್ಗವಾಗಿ ಬಂದು ಮಂದಿರದಲ್ಲಿ ಸಂಪನ್ನಗೊಂಡಿತು.ಶ್ರೀ ರಾಮ ವಿದ್ಯಾಕೇಂದ್ರದ 500 ಕ್ಕೂ ಹೆಚ್ಚು ಮಕ್ಕಳು ಕೃಷ್ಣ ಯಶೋದೆಯ ವೇಷದಲ್ಲಿ ಪಾಲ್ಗೊಂಡು ಕೃಷ್ಣಲೋಕ ಸೃಷ್ಟಿಸಿದರು.

ಓಂ ಶಕ್ತಿ ಬಳಗದ ಗಜಾಸುರ ವಧೆ,ಕುದ್ರೆಬೆಟ್ಟು ಮಣಿಕಂಠ ಯುವಶಕ್ತಿಯ ಅರುಣಾಸುರ ವಧೆ,ರಾಯಪ್ಪಕೋಡಿ ತ್ರಿಶೂಲ್ ಫ್ರೆಂಡ್ಸ್ ನ ವೃತ್ತಾಸುರ ವಧೆ,ಕಟ್ಟೆಮಾರು ಮಂತ್ರದೇವತಾ ಕ್ಷೇತ್ರದ ಬಂಡಾಸುರ ವಧೆ,ವಿಶ್ವ ಹಿಂದು ಪರಿಷತ್ ಭಜರಂಗ ದಳದ ಚೆಂಡೆವಾದನ,ನಾಸಿಕ್ ಬೇಂಡ್ ಮೊದಲಾದ ವಿವಿಧ ಸಂಘ ಸಂಸ್ಥೆಗಳ ಸ್ತಬ್ದಚಿತ್ರ,ಟ್ಯಾಬ್ಲೋ ,ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ಗೊಂಬೆ ಕುಣಿತ ಶೋಭಾಯಾತ್ರೆಗೆ ಮೆರಗು ನೀಡಿದರೆ,ರಸ್ತೆಯಲ್ಲಿ ಕಟ್ಟಲಾದ ಮಡಕೆಯನ್ನು ತರುಣರು ಪಿರಮಿಡ್ ರಚಿಸಿ ಒಡೆಯುವ ದೃಶ್ಯ ಗಮನಸೆಳೆಯಿತು.

ಹೆದ್ದಾರಿಯುದ್ದಕ್ಕು ಇಕ್ಕೆಲಗಳಲ್ಲಿ ಸಾವಿರಾರು ಮಂದಿ ಶೋಭಾಯಾತ್ರೆಯನ್ನು ವೀಕ್ಷಿಸಿದರು.ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ,ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ,ಸ್ಥಳೀಯ ಪ್ರಮುಖ ಚೆನ್ನಪ್ಪ ಕೋಟ್ಯಾನ್,ಕೆ.ಕೃಷ್ಣಪ್ಪ,ನಾರಾಯಣ ಸೋಮಾಯಾಜಿ,ನಿತಿನ್ ಕುಮಾರ್ ಕಲ್ಲಡ್ಕ,ದಿನೇಶ್ ಅಮ್ಟೂರು,ಸಮಿತಿ ಪದಾಧಿಕಾರಿಗಳು,ಸ್ಥಳೀಯ ಪ್ರಮುಖರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.