ತಾಯಿಯ ಪಾತ್ರ ಕುಟುಂಬದಲ್ಲಿ ಮಹತ್ತರವಾದುದು: ರೇಖಾ ಸತೀಶ್
ಬಂಟ್ವಾಳ :ಯಾರಿಂದಲೂ, ಯಾವುದರಿಂದಲೂ ತೀರಿಸಲಾಗದ್ದು ಅದು ತಾಯಿಋಣ. ತಾಯಿ ವ್ಯಕ್ತಿತ್ವ ರೂಪಿಸುವ ಶಕ್ತಿಯಾಗಿದ್ದಾಳೆ. ಪ್ರತೀ ಮನುಷ್ಯನ ಯಶಸ್ಸಿನ ಹಿಂದೆ ತಾಯಿ ಮಾತೃ ಪ್ರೇರಕ ಶಕ್ತಿಯಾಗಿದ್ದಾಳೆ, ತಾಯಿಯ ಪಾತ್ರ ಕುಟುಂಬದಲ್ಲಿ ಮಹತ್ತರವಾದುದು ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಪೊಳಲಿ ನಗರದ ಮಾರ್ಗದರ್ಶಕಿ ರೇಖಾ ಸತೀಶ್ ಕಾಜಿಲ ಅಭಿಪ್ರಾಯ ಪಟ್ಟರು.

ಅವರು ಕೊಯಿಲ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಬದನಡಿ ಇಲ್ಲಿ ನಡೆದ “ಮಾತೃ ಧ್ಯಾನ-ಮಾತೃ ಪೂಜನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಲೆಕ್ಕಪತ್ರ ಪ್ರಮುಖ್ ಶಿವಪ್ರಸಾದ್ ಪೊಳಲಿ ಮಾತೃಧ್ಯಾನ-ಮಾತೃಪೂಜನ ಕಾರ್ಯಕ್ರಮ ನೇರವೇರಿಸಿ, ಮಾತೃಪೂಜನ ಕಾರ್ಯಕ್ರಮವೂ ಗ್ರಾಮದ ವಿಕಾಸಕ್ಕೆ ಪೂರಕವಾದುದು, ಸಂಸ್ಕಾರಯುತ ಶಿಕ್ಷಣ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಮಾತೃಶಕ್ತಿಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರವೀಂದ್ರ ಪೂಜಾರಿ ಬದನಡಿ ವಹಿಸಿದ್ದರು.ಭಜನಾ ಮಂಡಳಿಯ ಅಧ್ಯಕ್ಷ ಸಂದೇಶ್ ಅಂತರ, ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಸುಜಾತ ಉಪಸ್ಥಿತರಿದ್ದರು. ಭಜನಾ ಮಂಡಳಿಯ ಗೌರವಾಧ್ಯಕ್ಷರು ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.