ಜಿಲ್ಲಾಡಳಿತ ಆದೇಶಕ್ಕೆ ಕವಡೆ ಕಿಮ್ಮತ್ತಿಲ್ಲ : ವೈಟ್‌ಗ್ರೋ ಅಣಬೆ ಘಟಕ ವಿರುದ್ಧ ಸಂತ್ರಸ್ತರ ದೂರು
ವಾಮಂಜೂರು ಅಣಬೆ ಫ್ಯಾಕ್ಟರಿ ಮಾಲಕರಿಂದ ಸಾರ್ವಜನಿಕರ ದಾರಿ ತಪ್ಪಿಸುವ ಪ್ರಯತ್ನ : ಜಗದೀಶ ಶೇಣವ
ಕೈಕಂಬ: ವಾಮಂಜೂರು ತಿರುವೈಲು ವಾರ್ಡ್ನ ಓಂಕಾರನಗರದಲ್ಲಿ ಕಳೆದ ಎರಡೂವರೆ ವರ್ಷದಿಂದ ಕಾರ್ಯಾಚರಿಸುತ್ತಿರುವ ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ ಅಣಬೆ ಉತ್ಪಾದನಾ ಘಟಕದಿಂದ ಆ. ೧೯ರ ನಂತರವೂ ದುರ್ವಾಸನೆ ಬೀರಿದರೆ, ಘಟಕ ಮುಚ್ಚುವವರೆಗೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ವೈಟ್‌ಗ್ರೋ ಅಣಬೆ ಫ್ಯಾಕ್ಟರಿ ವಿರುದ್ಧ ಹೋರಾಟ ಸಮಿತಿ ಎಚ್ಚರಿಸಿದೆ.

ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಆ. ೧೭ರಂದು ಸಮಿತಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತ ಜಗದೀಶ ಶೇಣವ ಮಾತನಾಡಿ, ವಸತಿ ಪ್ರದೇಶದಲ್ಲಿರುವ ಈ ಫ್ಯಾಕ್ಟರಿಯಿಂದ ಹೊಸಸೂಸುವ ದುರ್ವಾಸನೆ ತಡೆಯಬೇಕು, ಇಲ್ಲವೇ ಫ್ಯಾಕ್ಟರಿ ಸ್ಥಳಾಂತರಗೊಳಿಸಬೇಕು ಎಂದು ಆಗ್ರಹಿಸಿ ಸಮಿತಿಯು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿತ್ತು. ದುರ್ವಾಸನೆ ಮುಕ್ತಗೊಳಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಂಡು ಅಣಬೆ ಉತ್ಪಾದಿಸುವಂತೆ ಇತ್ತೀಚೆಗೆ ಮನಪಾ, ಮಾಲಿನ್ಯ ನಿಯಂತ್ರಣ ಮಂಡಳಿ ಸಹಿತ ಜಿಲ್ಲಾಡಳಿತ ಸೂಚನೆ ನೀಡಿತ್ತಾದರೂ, ಫ್ಯಾಕ್ಟರಿ ಮಾಲಕರು(ಮಾಜಿ ಶಾಸಕ ಜೆ. ಆರ್. ಲೋಬೊ ಮತ್ತು ಸ್ಥಳೀಯ ಪೆಟ್ರೋಲ್ ಪಂಪ್ ಮಾಲಕರಾದ ಆಲ್ವರಿಸ್) ಜಿಲ್ಲಾಡಳಿತದ ಆದೇಶಕ್ಕೆ ಕವಡೆ ಕಿಮ್ಮತ್ತು ನೀಡಿದಂತೆ ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯು ಫ್ಯಾಕ್ಟರಿಯ ಎದುರು ಜೂನ್ ೮ರಿಂದ ೪ ದಿನ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದು, ಅಂದಿನ ಜಿಲ್ಲಾಧಿಕಾರಿಯವರು ಫ್ಯಾಕ್ಟರಿಯ ಕಾಂಪೋಸ್ಟ್ ಘಟಕ ಸ್ಥಗಿತಗೊಳಿಸುವಂತೆ ಆದೇಶಿಸಿ, ಘಟಕದ ಸಮೀಕ್ಷೆಗಾಗಿ ೫ ಮಂದಿ ಸದಸ್ಯರ ಸಮಿತಿ ರಚಿಸಿದ್ದರು ಎಂದರು.
ಅಣಬೆ ಉತ್ಪಾದಿಸಲು ಗೊಬ್ಬರ ಮಿಶ್ರಣ ಸಿದ್ಧಪಡಿಸುವ ಸಂದರ್ಭದಲ್ಲಿ ಉತ್ಪತ್ತಿಯಾಗುವ ಅಮೋನಿಯಂ, ಹೈಡ್ರೋಜನ್, ಸಲ್ಫೇಟ್, ಮಿಥೇನ್ ಮತ್ತಿತರರ ರಾಸಾಯನಿಕ ಘಟಕಗಳು ಗಾಳಿಯಲ್ಲಿ ಸೇರಿ, ಉಸಿರಾಟಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಸಮೀಕ್ಷೆ ಆಧರಿಸಿ ಮಂಗಳೂರು ನಗರ ಪಾಲಿಕೆ ವರದಿ ಮಾಡಿದೆ. ಬಳಿಕ ಫ್ಯಾಕ್ಟರಿಯಲ್ಲಿ ಅಣಬೆ ಉತ್ಪಾದನೆಯ ಕಾರ್ಯವೈಖರಿ ಬಗ್ಗೆ ದಿನನಿತ್ಯದ ವರದಿ ಸಿದ್ಧಪಡಿಸುವ(ಜುಲೈ ೩೧ರಿಂದ ಆಗಸ್ಟ್ ೧೯ರವರೆಗೆ) ಉದ್ದೇಶದಿಂದ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮುಂದುವರಿಸುವಂತೆ ಸೂಚಿಸಿದೆ. ಜಿಲ್ಲಾಡಳಿತ ಆದೇಶ ಸಾರಾಸಗಟಾಗಿ ಉಲ್ಲಂಘನೆಯಾಗಿರುವ ಘಟಕದಿಂದ ದಿನರಾತ್ರಿ ಶಬ್ದ ಮಾಲಿನ್ಯ, ಜಲ ಮಾಲಿನ್ಯ ಮುಂದುವರಿದಿದ್ದು, ಎಂದಿಗಿಂತ ಹೆಚ್ಚು ದುರ್ವಾಸನೆ ಬೀರುತ್ತಿದೆ ಎಂದು ಆರೋಪಿಸಿದರು.
ಜೆ. ಆರ್. ಲೋಬೊ ಅವರು ಮಾಧ್ಯಮದ ಮೂಲಕ ಸಾರ್ವಜನಿಕರ ದಾರಿ ತಪ್ಪಿಸಲೆಂದೇ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಫ್ಯಾಕ್ಟರಿಯೊಳಗೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಜಿಲ್ಲಾಡಳಿತದ ಸೂಚನೆಯಂತೆ ದುರ್ವಾಸನೆ ತಡೆಯಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜಲಮಾಲಿನ್ಯ, ವಾಯುಮಾಲಿನ್ಯ ಅಥವಾ ಪರಿಸರ ಮಾಲಿನ್ಯ ಆಗುತ್ತಿಲ್ಲ. ಶೇ. ೮೦ರಷ್ಟು ದುರ್ವಾಸನೆ ಸ್ಥಗಿತಗೊಂಡಿದೆ. ಉಳಿದಂತೆ ಕೆಲವು ಫ್ಯಾಕ್ಟರಿಯ ಸಂದುಗಳಲ್ಲಿ ಗೊಬ್ಬರದ ವಾಸನೆ ಹೊರಸೂಸುತ್ತಿದ್ದು, ಅದನ್ನು ಸಂಪೂರ್ಣವಾಗಿ ತಡೆಯಲು ಕ್ರಮ ಕೈಗೊಳ್ಳಲಾಗುವುದು. ವಿದೇಶಗಳಲ್ಲಿ ಜನವಸತಿ ಪ್ರದೇಶದಲ್ಲೇ ಇಂತಹ ಘಟಕಗಳಿದ್ದರೂ ವಿರೋಧಗಳು ವ್ಯಕ್ತವಾಗಿಲ್ಲ ಎಂದು ಲೋಬೊ ಹೇಳಿದ್ದರು. ಆದರೆ ಗೂಗಲ್ ನಕಾಶೆ ಗಮನಿಸಿದರೆ, ಯಾವುದೇ ಅಣಬೆ ಘಟಕ ಜನವಸತಿ ಪ್ರದೇಶದಲ್ಲಿಲ್ಲ. ಅವು ಕಾಡಿನಲ್ಲಿ ಅಥವಾ ನಿರ್ಜನ ಪ್ರದೇಶದಲ್ಲಿವೆ. ಘಟಕದಿಂದ ಸೋರಿಕೆಯಾಗುತ್ತಿರುವ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಅದು ನೇರವಾಗಿ ಫಲ್ಗುಣಿ ನದಿ ಸೇರುತ್ತಿದೆ. ದುರ್ವಾಸನೆಯಿಂದ ಜನ ವಾಸಿಸುವ ಹಾಗಿಲ್ಲ. ರೋಗರುಜಿನಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಶೇಣವ ವಿವರಿಸಿದರು.
ತಾಂತ್ರಿಕ ಸಮಿತಿಯು ಈವರೆಗೆ ಅಣಬೆ ಘಟಕ ವಿರುದ್ಧ ರಚಿಸಲಾಗಿರುವ ಹೋರಾಟ ಸಮಿತಿ ಅಥವಾ ಫ್ಯಾಕ್ಟರಿ ಸುತ್ತಲ ಪ್ರದೇಶದ ಜನರ ಅಭಿಪ್ರಾಯ ಸಂಗ್ರಹಿಸಿಲ್ಲ. ಹಾಗಾಗಿ ಈ ಸಮಿತಿಯು ಜಿಲ್ಲಾಡಳಿತಕ್ಕೆ ನೀಡುವ ವರದಿ ಫ್ಯಾಕ್ಟರಿ ಮಾಲಕರ ಪರವಾಗಿ ಇರಬಹುದಾದ ಶಂಕೆ ಬಲವಾಗಿದೆ. ಒಂದೊಮ್ಮೆ ಹಾಗೇನಾದರೂ ಆದರೆ, ಫ್ಯಾಕ್ಟರಿ ಮುಚ್ಚುವವರೆಗೆ ಸಮಿತಿಯು ಹೋರಾಟ ತೀವ್ರಗೊಳಿಸಲಿದೆ ಮತ್ತು ಕಾನೂನು ಹೋರಾಟ ನಡೆಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿ ಅಧ್ಯಕ್ಷರಾದ ಓಂಪ್ರಕಾಶ್ ಶೆಟ್ಟಿ, ರಿಯಾಝ್ ವಾಮಂಜೂರು, ವಿಲಿಯಂ ಡಿ’ಸೋಜ, ಪದಾಧಿಕಾರಿಗಳಾದ ಲಕ್ಷ್ಮಣ್ ಶೆಟ್ಟಿಗಾರ, ಜಯಂತಿ ದಾಮೋದರ ಅಮೀನ್, ಜಯಪ್ರಭಾ ಓಂಕಾರನಗರ, ಕಾರ್ಮಿನ್ ಲೋಬೊ ಓಂಕಾರನಗರ ಹಾಗೂ ಶ್ರೀನಿವಾಸ ಸುವರ್ಣ, ಹರಿಪ್ರಸಾದ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು