ಆರೋಗ್ಯ ಮತ್ತು ಶಿಕ್ಷಣ ದೇಶದ ಭದ್ರ ಬುನಾದಿ: ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು
ಬಂಟ್ವಾಳ: ಆರೋಗ್ಯ ಮತ್ತು ಶಿಕ್ಷಣ ದೇಶದ ಭದ್ರ ಬುನಾದಿಯಾಗಿದ್ದು, ಅದಕ್ಕಾಗಿ ಎಲ್ಲರೂ ಸ್ವಾರ್ಥ ರಹಿತವಾಗಿ ಶ್ರಮಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರಿಗೆ ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ ಇದ್ದಾಗ ಮಾತ್ರ ಶೈಕ್ಷಣಿಕವಾಗಿ ಹಾಗೂ ಭೌತಿಕ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಮಜಿ ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥರಾದ ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ರವರು ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಶಿಕ್ಷಕ, ರಕ್ಷಕ ಸಂಘದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಇದೇ ವೇಳೆ ತಮ್ಮ ದತ್ತು ಸಂಸ್ಥೆಯ ಮೂಲಕ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಿದ ಸಮವಸ್ತ್ರ ವನ್ನು ವಿತರಿಸಲಾಯಿತು.

ಶಾಲೆಯನ್ನು ಇನ್ನಷ್ಟು ಅಭಿವೃದ್ಧಿ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಪೋಷಕರೊಂದಿಗೆ ಚರ್ಚಿಸಿ ಸಲಹೆ ಅಭಿಪ್ರಾಯವನ್ನು ಪಡೆದರು.ಅದೇರೀತಿ ಶಾಲೆಗೆ ಮುಖ್ಯ ಶಿಕ್ಷಕ ಹುದ್ದೆಗೆ ವಗಾ೯ವಣೆಯಾಗಿ ಬಂದ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಹಾಗೂ ಶಿಕ್ಷಕಿ ಮಮತಾ ರವರನ್ನು ದತ್ತು ಸಂಸ್ಥೆಯ ಪರವಾಗಿ ಸ್ವಾಗತಿಸಲಾಯಿತು.
ಕಲ್ಲಡ್ಕ ಕ್ಲಸ್ಟರ್ನ ಸಿ. ಆರ್.ಪಿ. ಜ್ಯೋತಿ ಶಿಕ್ಷಣ ಇಲಾಖೆಯ ಇಲಾಖೆವಾರು ಮಾಹಿತಿ, ದಾಖಲಾತಿ ಸಂದರ್ಭದಲ್ಲಿ ಆಗುವ ತಪ್ಪು ಹಾಗೂ ಅವುಗಳಿಂದ ಆಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೊರಗಪ್ಪ ನಾಯ್ಕ್ ಸಿಂಗೇರಿ, ಉಪಾಧ್ಯಕ್ಷ ವಿಜಯ ಶೇಖರ್, ವೀರಕಂಭ ಗ್ರಾಮ ಪಂಚಾಯತ್ ಸದಸ್ಯೆ ಜಯಂತಿ ಜನಾರ್ಧನ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರಾ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ , ಹಿರಿಯ ಶಿಕ್ಷಕಿ ಶಕುಂತಲಾ ಎಂ.ಬಿ ವಂದಿಸಿದರು, ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿದರು.