ಅಮೃತ ಯೋಜನೆಯಲ್ಲಿ ರೈತರ ವಿವಿಧ ಬೇಡಿಕೆ ಪೂರೈಸುವಲ್ಲಿ ಸಫಲ: ರಾಜಾ ಬಂಟ್ವಾಳ್
ಬಂಟ್ವಾಳ: ರೈತ ಉತ್ಪನ್ನಗಳ ಖರೀದಿ ಮೌಲ್ಯವರ್ಧನೆ ಮಾರಾಟ ಉದ್ದೇಶದೊಂದಿಗೆ ಬೊಲ್ಪು ರೈತ ಉತ್ಪಾದಕ ಕಂಪೆನಿ ಕೃಷಿ ಇಲಾಖೆಯಡಿ ಬಂಟ್ವಾಳ ತಾಲೂಕಿನಿಂದ ನೋಂದಾಯಿತ ಪ್ರಥಮ ಸಂಸ್ಥೆ ಎಂದು ಸಂಸ್ಥೆಯ ಅಧ್ಯಕ್ಷ ರಾಜಾ ಬಂಟ್ವಾಳ್ ಹೇಳಿದರು.ಬಿ.ಸಿ.ರೋಡ್ ನ ರಂಗೋಲಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯಲ್ಲಿ ಪ್ರಸ್ತುತ ೫೧೧ ಸದಸ್ಯರಿದ್ದು, ೭.೮೧ ಲಕ್ಷ ರೂ. ಷೇರು ಬಂಡವಾಳ ಹೊಂದಿದೆ. ಕರ್ನಾಟಕ ಸರಕಾರದ ಅಮೃತ ಯೋಜನೆಯಡಿಯಲ್ಲಿ ರೈತರ ವಿವಿಧ ಬೇಡಿಕೆಗಳನ್ನು ಪೂರೈಸುವಲ್ಲಿ ಸಫಲವಾಗಿದೆ ಎಂದರು.ಒಂದು ಸಾವಿರಕ್ಕೂ ಅಧಿಕ ಹೊಸ ಸದಸ್ಯರನ್ನು ನೋಂದಾಯಿಸುವುದು. ಹೊಸ ವ್ಯವಹಾರ ಪ್ರಕ್ರಿಯೆಗಳನ್ನು ದಾಖಲಿಸುವುದು. ಪ್ರಸ್ತುತ ರೈತರಿಗೆ ಒದಗಿಸುತ್ತಿರುವ ತರಕಾರಿ ಬೀಜ, ಟರ್ಪಲಿನ್, ಬುಟ್ಟಿ ಹಾಗೂ ಇನ್ನಿತರ ಸೌಲಭ್ಯಗಳನ್ನು ನಿರಂತರ ಪೂರೈಸಲು ಕ್ರಮ ವಹಿಸುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ನಿರ್ದೇಶಕ ಕಾರ್ಯದರ್ಶಿ ಸದಾನಂದ ಡಿ. ಶೆಟ್ಟಿ ರಂಗೋಲಿ, ಎಫ್‌ಐಜಿಗ್ರೂಪ್ ನಿರ್ದೇಶಕರಾದ ಅರ್ವಿನ್ ಡಿ’ಸೋಜಾ ಲೊರೆಟ್ಟೊ, ಜಗದೀಶ ಭಂಡಾರಿ ಕುರಿಯಾಳ, ಸೀತಾರಾಮ ಶೆಟ್ಟಿ ಸಜಿಪ ಉಪಸ್ಥಿತರಿದ್ದರು.
ಇದೇ ವೇಳೆ ನೋಂದಾಯಿತ ರೈತರಿಗೆ ಷೇರು ಪತ್ರವನ್ನು ವಿತರಿಸಲಾಯಿತು. ಹಲಸಿನ ವಿವಿಧ ತಳಿಗಳ ಗಿಡಗಳ, ಹಲಸಿನ ವಿವಿಧ ಉತ್ಪನ್ನಗಳು, ತರಕಾರಿ ಬೀಜಗಳು, ಜೇನು ತುಪ್ಪ, ತೆಂಗಿನ ತುರಿಮನೆ, ವಿನೇಗಾರ್ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಮಾಡಲಾಗಿತ್ತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಎನ್. ವರದಿ ವಾಚಿಸಿದರು. ನಿರ್ದೇಶಕ ದೇವಪ್ಪ ಕುಲಾಲ್ ಪಂಜಿಕಲ್ಲು ಸ್ವಾಗತಿಸಿದರು. ವಿಜಯ ರೈ ವಾಮದಪದವು ವಂದಿಸಿದರು. ಕೃಷ್ಣಪ್ಪ ಸಪಲ್ಯ ಅಂತರ ಕಾರ್ಯಕ್ರಮ ನಿರ್ವಹಿಸಿದರು.