ಕಠ್ಮಂಡು: ಭಯೋತ್ಪಾದನೆ ವಿರುದ್ಧ ನೆರೆಹೊರೆಯ ರಾಷ್ಟ್ರಗಳು ಸಾಂಘಿಕ ಹೋರಾಟ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನೇಪಾಳದಲ್ಲಿ ನಡೆಯುತ್ತಿರುವ 18ನೇ ಸಾರ್ಕ್ (South Asian Association for Regional Cooperation) ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ನಾನು ಮೊದಲ ಬಾರಿಗೆ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದೇನೆ. ಆದರೆ ನಿಮ್ಮೆಲರನ್ನೂ ಒಟ್ಟಿಗೆ ಎರಡನೇ ಬಾರಿ ಭೇಟಿಯಾಗುವ ಅವಕಾಶ ನನಗೆ ದೊರೆತಿದೆ. ಭವಿಷ್ಯದ ಭಾರತಕ್ಕಾಗಿ ನಾನು ಕಾಣುತ್ತಿರುವ ಕನಸು ನಮ್ಮ ನೆರೆಹೊರೆಯ ದೇಶಗಳ ಪಾಲಿಗೂ ನನಸಾಗಲಿ ಎಂದು ನಾನು ಆಶಿಸುತ್ತೇನೆ. ನೆರೆಹೊರೆಯ ದೇಶಗಳು ಉತ್ತಮ ಬಾಂಧವ್ಯ ಹೊಂದಿರಬೇಕೆಂಬುದು ಇಡೀ ವಿಶ್ವದ ಮಹಾತ್ವಾಕಾಂಕ್ಷೆಯಾಗಿದೆ ಎಂದು ಹೇಳಿದರು.

‘ನಾವು ಪರಸ್ಪರ ಕಲಿತುಕೊಳ್ಳುವುದು ಸಾಕಷ್ಟಿದೆ. ನಾವು ಬ್ಯಾಂಕಾಕ್ ಮತ್ತು ಸಿಂಗಾಪುರ ರಾಷ್ಟ್ರಗಳ ಜೊತೆಗಿನ ಮಾತುಕತೆಗಿಂತ ನಮ್ಮ ನೆರೆಹೊರೆ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸುವುದು ಅಧಿಕ ದುಬಾರಿಯಾಗಿದೆ. ನಮ್ಮ ಗತಕಾಲದ ವೈಮನಸ್ಸಿನಿಂದಾಗಿ ನಾವು ಪರಸ್ಪರ ನಮಗೇನು ಬೇಕೋ ಅದನ್ನು ಸಾಧಿಸಿಕೊಳ್ಳುವಲ್ಲಿ ಹಿಂದೆ ಬಿದಿದ್ದೇವೆ. ನಾನು ಕಠ್ಮಂಡುಗೆ ರಸ್ತೆ ಮಾರ್ಗವಾಗಿ ಆಗಮಿಸಲು ಮುಂದಾದಾಗ ನಮ್ಮ ಅಧಿಕಾರಿಗಳು ರಸ್ತೆಗಳ ಪರಿಸ್ಥಿತಿ ಕೆಟ್ಟದಾಗಿದ್ದರಿಂದ ತಡೆದರು. ಇಂತಹ ವಿಚಾರಗಳ ಬಗ್ಗೆ ನಾವು ಗಂಭೀರವಾಗಿ ಆಲೋಚಿಸಬೇಕಿದೆ’.
‘ನಮ್ಮದು ಆಭಿವೃದ್ದಿ ಪ್ರಜಾಪ್ರಭುತ್ವ. ಭಯೋತ್ಪಾದನೆ ಎಂಬುದು ಕೇವಲ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಮಾತ್ರವಲ್ಲದೇ ಈಡೀ ವಿಶ್ವವನ್ನು ಕಾಡುತ್ತಿರುವ ಪಿಡುಗಾಗಿದೆ. ಹೀಗಾಗಿ ಭಯೋತ್ಪಾದನೆ ವಿರುದ್ಧ ಹೋರಾಡಲು ದಕ್ಷಿಣ ಏಷ್ಯಾ ರಾಷ್ಟ್ರಗಳಿಗಿಂತಲೂ ಹೆಚ್ಚಾಗಿ ವಿಶ್ವ ಸಮುದಾಯದ ಸಾಂಘಿಕತೆ ಅಗತ್ಯ. ಕಳೆದ ನಾಲ್ಕೈದು ತಿಂಗಳಲ್ಲಿ ನಾನು ವಿಶ್ವದ ನಾನಾ ಪ್ರದೇಶಗಳಲ್ಲಿ ಸುತ್ತಾಡಿ ಬಂದಿದ್ದೇನೆ. ದೊಡ್ಡ ಸಮಸ್ಯೆಯೋ ಚಿಕ್ಕ ಸಮಸ್ಯೆಯೋ ಇಡೀ ವಿಶ್ವ ಮತ್ತದೇ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಭಿವೃದ್ಧಿಗಾಗಿ ನಾವು ಇನ್ನೂ ಸಾಕಷ್ಟು ಹಾದಿ ಸವೆಸಬೇಕಿದೆ’ ಎಂದು ಹೇಳಿದರು.
ಇದೇ ವೇಳೆ 2008ರ ಮುಂಬೈ ದಾಳಿ ಪ್ರಕರಣವನ್ನು ನೆನೆದ ಪ್ರಧಾನಿ ಮೋದಿ ಅವರು, ಘಟನೆಯಲ್ಲಿ ಮೃತಪಟ್ಟ 166 ಮಂದಿಗೆ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲದೆ ಭಯೋತ್ಪಾದನೆ ವಿರುದ್ಧ ಇಡೀ ವಿಶ್ವವೇ ಸಾಂಘಿಕವಾಗಿ ಹೋರಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
‘ನಮ್ಮ ವಾಣಿಜ್ಯ ವಹಿವಾಟಿನ ಪ್ರಮಾಣವನ್ನು ಗಣನೀಯವಾಗಿ ಏರಿಕೆ ಮಾಡಬೇಕಿದ್ದು, ಇದಕ್ಕಾಗಿ ಸಾಕಷ್ಟು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ವಿದೇಶಗಳಲ್ಲಿ ನಮ್ಮ ಭಾರತೀಯ ಉಧ್ಯಮಿಗಳು ಶತಕೋಟಿ ಡಾಲರ್‌ಗಳನ್ನು ಹೂಡಿದ್ದಾರೆ. ಆದರೆ ಅವುಗಳ ಪೈಕಿ ಶೇ.1ರಷ್ಟನ್ನೂ ಕೂಡ ನೆರೆಯ ವಾಣಿಜ್ಯ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿಲ್ಲ. ನೆರೆ ರಾಷ್ಟ್ರಗಳ ನಡುವೆ ಸಂಪರ್ಕ ಬಹುಮುಖ್ಯವಾಗಿದ್ದು, ರೈಲು ಮತ್ತು ರಸ್ತೆಗಳು ಈ ವಿಚಾರದಲ್ಲಿ ಬಹಳ ಪ್ರಮುಖ ಪಾತ್ರವನ್ನು ನಿಭಾಯಿಸಲಿವೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ ರಸ್ತೆ ಮತ್ತು ರೈಲು ಮಾರ್ಗಗಳು ಸಾಕಷ್ಟಿದ್ದು, ಭಾರತ ಮತ್ತು ನೇಪಾಳ ರಾಷ್ಟ್ರಗಳು ವಿದ್ಯುತ್ ವಿನಿಮಯ ಮಾಡಿಕೊಳ್ಳುವ ಮೂಲಕ ಹೊಸ ಶಕೆಯನ್ನು ಆರಂಭಿಸಿವೆ’.
‘ಇನ್ನು ಶ್ರೀಲಂಕಾ ರಾಷ್ಟ್ರದೊಂದಿಗೆ ನಾವು ಉಚಿತ ವಾಣಿಜ್ಯ ಒಪ್ಪಂದ ಮಾಡಿಕೊಂಡಿದ್ದು, ಮಾಲ್ಡಿವ್ಸ್‌ನೊಂದಿಗೆ ಶೀಘ್ರದಲ್ಲಿ ಒಪ್ಪಂದ ಮಾಡಿಕೊಳ್ಳಲ್ಲಿದ್ದೇವೆ. ಪ್ರವಾಸೋಧ್ಯಮ ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, ನಾವು ನಮ್ಮ ನಮ್ಮ ರಾಷ್ಟ್ರಗಳಲ್ಲಿ ಪ್ರವಾಸೋಧ್ಯಮವನ್ನು ಪ್ರಚುರ ಪಡಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
