ಕಸಾಪ ತಾಲೂಕು ಕಚೇರಿ ಉದ್ಘಾಟನೆ ಮತ್ತು ‘ರಂಗಸ್ಥಳದ ರಾಜ ಅರುವ’ ಕೃತಿ ಬಿಡುಗಡೆ
ಓದುವ ಆಸಕ್ತಿ ಬೆಳೆಸಲು ಕ್ರಮ:ಡಾ ಶ್ರೀನಾಥ್
ಮೂಡುಬಿದಿರೆ: ಜನರಲ್ಲಿ ಓದುವ ಆಸಕ್ತಿ ಕುಂಠಿತಗೊಳ್ಳುತ್ತಿದ್ದು, ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ ಬೆಳಸುವ ಜವಾಬ್ದಾರಿಯನ್ನು ‘ಕಸಾಪ’ ಹೊತ್ತುಕೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದಿರೆ ತಾಲೂಕು ಘಟಕದ ಸಹಯೋಗದಲ್ಲಿ ಇಲ್ಲಿನ ಕನ್ನಡ ಭವನದಲ್ಲಿ ಮಂಗಳವಾರ ನಡೆದ ‘ಕಚೇರಿ ಉದ್ಘಾಟನೆ’ ಮತ್ತು ಕೊರಗಪ್ಪ ಶೆಟ್ಟಿ ಅವರ ಅಭಿನಂದನಾ ಗ್ರಂಥ ‘ರಂಗಸ್ಥಳದ ರಾಜ ಅರುವ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಸಾಪ ಪ್ರತಿ ವರ್ಷ ನೂರಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಸದಸ್ಯರ ಸಕ್ರಿಯತೆ ಮತ್ತು ಉತ್ಸುಕತೆಯಿಂದ ಉತ್ತಮ ಕೊಡುಗೆ ನೀಡಬಹುದಾಗಿದೆ ಎಂದರು.
ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಕಸಾಪ ಸದಸ್ಯತ್ವ ಕಡಿಮೆ ಇದೆ. ಇದು ಬೇಸರದ ಸಂಗತಿ. ಯುವಜನತೆ ಕಸಾಪ ಅಜೀವ ಸದಸ್ಯರಾಗುವ ಮೂಲಕ ಸಾಹಿತ್ಯಕ್ಕೆ ಕೊಡುಗೆ ನೀಡಬೇಕಾಗಿದೆ ಎಂದರು.ಕೃತಿ ಬಿಡುಗಡೆ ಮಾಡಿದ ಯಕ್ಷಗಾನ ವಿಮರ್ಶಕ ಡಾ ಎಂ. ಪ್ರಭಾಕರ ಜೋಷಿ, ಸಾಹಿತ್ಯ ಅಭಿರುಚಿ ಪಸರಿಸುವುದು ಸಾಹಿತ್ಯ ಪರಿಷತ್ತಿನ ಕೆಲಸ. ಯಕ್ಷಗಾನ ಬಹುಸಂಸ್ಕೃತಿಯ ಕಲೆ. ಇಲ್ಲಿ ಕಲಾವಿದ ಪಕ್ವತೆ ಪಡೆಯುತ್ತಾನೆ. ಇದಕ್ಕೆ ಉತ್ತಮ ಉದಾಹರಣೆ ಕೊರಗಪ್ಪ ಶೆಟ್ಟಿ. ಅವರ ಕಲಾಬದುಕು ಸರ್ವರಿಗೂ ಪ್ರೇರಣೆ ಎಂದರು.
ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಮಾತನಾಡಿ, ತನ್ನ ಬದುಕಿನ ಅವಿಸ್ಮರಣೀಯ ನೆನಪುಗಳನ್ನು ಮೆಲುಕು ಹಾಕಿದರು. ಗುರುಗಳಿಗೆ ಕೃತಜ್ಞತೆ ಸಲ್ಲಿಸಿದರು. ಪ್ರೇಕ್ಷಕರ ಪ್ರೇರಣೆ ತನ್ನ ಕಲಾ ಬದುಕಿಗೆ ಉಮೇದು ನೀಡಿದ್ದು, ಜನರ ಪ್ರೀತಿಗೆ ಅಭಾರಿಯಾಗಿದ್ದೆನೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ ನಕಾರಾತ್ಮಕ ಚಿಂತನೆ ತೊಡೆದು ಹಾಕಿ. ದೊರೆತ ಸಂಪನ್ಮೂಲ ಬಳಸಿಕೊಂಡು ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಮುನ್ನಡೆಸುವ ಜವಾಬ್ದಾರಿ ಸಾಹಿತ್ಯ ಪರಿಷತ್ತಿನ ಮೇಲಿದೆ ಎಂದರು
ಕಸಾಪ ಮೂಡುಬಿದಿರೆ ತಾಲ್ಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿ, ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಯೋಗಿಶ್ ಕೈರೊಡಿ ನಿರೂಪಿಸಿದರು
“ಅರುವ ಕೊರಗಪ್ಪ ಶೆಟ್ಟಿ ಯಕ್ಷಲೋಕದ ಶ್ರೀಮಂತ ಪ್ರತಿಭೆ. ಅವರ ವೈಯಕ್ತಿಕ ಮತ್ತು ಕಲಾ ಬದುಕಿನ ದಾರಿ ಸಹಸ್ರಾರು ಜನರಿಗೆ ಪ್ರೇರಣೆ”
ಡಾ.ಎಂ.ಮೋಹನ ಆಳ್ವ ಅಧ್ಯಕ್ಷ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ