ಮಧ್ವ ಯಕ್ಷಕೂಟ ಮಡಂತ್ಯಾರು ವಲಯ ಸಮಿತಿ ಅದ್ಯಕ್ಷರಾಗಿ ರವಿಶಂಕರ್ ಶೆಟ್ಟಿ ಆಯ್ಕೆ
ಬಂಟ್ವಾಳ : ತಾಲೂಕಿನ ಮಧ್ವ ಯಕ್ಷಕೂಟದ ಮಡಂತ್ಯಾರು ವಲಯ ಸಮಿತಿಯ ಉದ್ಘಾಟನೆಯ ಪೂರ್ವಭಾವಿ ಸಭೆ ಮಾಲಾಡಿ,ಕೊಲ್ಪೆದಬೈಲ್ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯಿತು.
ಹಿರಿಯ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಡಿ.ತಿಮ್ಮಪ್ಪ ಶೆಟ್ಟಿ ಪಾತಿಲ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನ ನೃತ್ಯ, ಮಾತುಗಾರಿಕೆ, ಸಂಗೀತ, ವೇಷಭೂಷಣ ಹೀಗೆ ವಿವಿಧ ಕಲೆಗಳು ಒಗ್ಗೂಡುವಿಕೆಯ ವಿಶೇಷ ಕಲಾ ಪ್ರಕಾರವಾಗಿದೆ. ನಮ್ಮ ಸಂಸ್ಕೃತಿ, ಪುರಾಣದ ವಿಚಾರಗಳನ್ನು ಯಕ್ಷಗಾನದ ಮೂಲಕ ತಿಳಿಯಬಹುದು. ಇಂತಹ ಕಲೆಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಡಂತ್ಯಾರು ವಲಯ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಮೂಡಾಯೂರು ರವಿಶಂಕರ್ ಶೆಟ್ಟಿ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಯಶೋಧರ ಟೈಲರ್, ಕೃಷ್ಣ ಶೆಟ್ಟಿ ಸೋಣಂದೂರು, ಕಾರ್ಯದರ್ಶಿಯಾಗಿ ಜನಾರ್ದನ ಶೆಟ್ಟಿ, ಕೋಶಾಽಕಾರಿಯಾಗಿ ಪುರುಷೋತ್ತಮ ಶೆಟ್ಟಿ ಹಾಗೂ ಗೌರವ ಸಲಹೆಗಾರರು ಮತ್ತು ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಹಿರಿಯ ಯಕ್ಷಗಾನ ಅರ್ಥಧಾರಿ ಜಿನೇಂದ್ರ ಜೈನ್ ಬಳ್ಳಮಂಜ, ಸಂಜೀವ ಶೆಟ್ಟಿ ಉರೆಸಾಗು, ಮಂಜುನಾಥ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ರಮೇಶ್ ಹೆಗ್ಡೆ, ಲಕ್ಷ್ಮೀ ನಾರಾಯಣ ಆಚಾರ್ಯ,ಯಕ್ಷ ಕೂಟ ಸಮಿತಿ ಪದಾಽಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.
ಮಡಂತ್ಯಾರು ವಲಯ ಸಮಿತಿಯ ಉದ್ಘಾಟನೆ ಹಾಗೂ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜು. ೯ರಂದು ಕೊಲ್ಪೆದಬೈಲ್ ಎಸ್‌ಕೆಎಸ್ ಸಭಾಂಗಣದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಯಕ್ಷ ಕೂಟದ ಅಧ್ಯಕ್ಷ ಭಾಸ್ಕರ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಸಿದರು. ಉಪಾಧ್ಯಕ್ಷ ರತ್ನದೇವ್ ಪುಂಜಾಲಕಟ್ಟೆ ಸಂಘದ ವಿವರ ನೀಡಿದರು. ಮಡಂತ್ಯಾರು ಸಮಿತಿ ಕಾರ್ಯದರ್ಶಿ ಜನಾರ್ದನ ಶೆಟ್ಟಿ ವಂದಿಸಿದರು.