ಪಾಣೆಮಂಗಳೂರು: ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ‘ಗುಣಮಟ್ಟದ ಶಿಕ್ಷಣಕ್ಕೆ ಶಿಸ್ತುಬದ್ಧ ಜೀವನ ಪೂರಕ’
ಬಂಟ್ವಾಳ:ದೇಶದಲ್ಲಿ ಹಿಂದಿನ ಮತ್ತು ಪ್ರಸಕ್ತ ಶಿಕ್ಷಣ ವ್ಯವಸ್ಥೆ ನಡುವೆ ಭಾರೀ ವ್ಯತ್ಯಾಸ ಉಂಟಾಗಿದ್ದು, ಆಹಾರ ಮತ್ತು ಶಿಕ್ಷಣದಿಂದ ಯಾವುದೇ ಮಕ್ಕಳು ವಂಚಿತರಾಗಬಾರದು. ಕನ್ನಡ ಮತ್ತು ಆಂಗ್ಲ ಭಾಷಾ ವ್ಯತ್ಯಾಸ ಇಲ್ಲದೆ ಗುಣಮಟ್ಟದ ಶಿಕ್ಷಣದಿಂದ ಶಿಸ್ತುಬದ್ಧ ಬದುಕು ನಡೆಸಲು ಸಾಧ್ಯವಾಗುತ್ತದೆ. ಶಿಕ್ಷಣದಿಂದ ಗುರು ಹಿರಿಯರನ್ನು ಗೌರವಿಸಿ ದುಶ್ಚಟದಿಂದ ದೂರ ಉಳಿದು ಶಿಸ್ತುಬದ್ಧ ಜೀವನ ನಡೆಸಬೇಕು ಎಂದು ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಹೇಳಿದ್ದಾರೆ.

ಇಲ್ಲಿನ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಕಾನೂನು ಸೇವೆಗಳ ಸಮಿತಿ ಸಹಿತ ವಕೀಲರ ಸಂಘ , ಶಿಕ್ಷಣ ಇಲಾಖೆ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಸೋಮವಾರ ನಡೆದ ‘ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಂದರ ಬದುಕಿಗೆ ಸುಸಂಸ್ಕೃತ ಶಿಕ್ಷಣ ಅಗತ್ಯ ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ರಾಜೇಶ ಬೊಳ್ಳುಕಲ್ಲು ಶುಭ ಹಾರಿಸಿದರು. ಸರ್ಕಾರಿ ವಕೀಲೆ ಹರಿಣಿ ಕುಮಾರಿ ಡಿ., ಕಾರ್ಮಿಕ ಅಧಿಕಾರಿ ಮರ್ಲಿನ್ ಡಿಸೋಜ, ಶಾಲಾ ಸಂಚಾಲಕ ಡಾ.ಪಿ.ವಿಶ್ವನಾಥ ನಾಯಕ್, ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ ಇದ್ದರು.
ಇದೇ ವೇಳೆ ಸಂಪನ್ಮೂಲ ವ್ಯಕ್ತಿಯಾಗಿ ವಕೀಲೆ ಶೈಲಜಾ ರಾಜೇಶ ಮಾಹಿತಿ ನೀಡಿದರು.ಮುಖ್ಯಶಿಕ್ಷಕ ಭೋಜ ಸ್ವಾಗತಿಸಿ, ಶಿಕ್ಷಕ ಧನರಾಜ್ ವಂದಿಸಿದರು. ಶಿಕ್ಷಕ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು.