ಪುತ್ತೂರು ಜಿಲ್ಲಾ ಸಂಘ ಚಾಲಕ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ನಿಧನ
ಬಂಟ್ವಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘ ಚಾಲಕ, ಸಾಮಾಜಿಕ,ಧಾರ್ಮಿಕ,ಸಹಕಾರಿ ದುರೀಣ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ( 61)ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಸದಾ ನಗುಮುಖ, ಗಂಭೀರ ವ್ಯಕ್ತಿತ್ವ,ನೇರ ನಡೆ ನುಡಿಯವರಾಗಿದ್ದ ಕಾಂತಪ್ಪ ಶೆಟ್ಟಿಯವರು ಹೃದಯ ವೈಶಾಲ್ಯತೆಯುಳ್ಳವರಾಗಿದ್ದರು.ಕೆಲ ಸಮಯಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು,ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಮವಾರ ಮಧ್ಯಾಹ್ನ ಅವರು ಕೊನೆಯುಸಿರೆಳೆದಿದ್ದಾರೆ.
ರಾ.ಸ್ವ.ಸೇ.ಸಂಘದಲ್ಲಿ ಮಾತ್ರವಲ್ಲ ಭಾರತೀಯ ಜನತಾಪಕ್ಷದಲ್ಲು ಗುರುತಿಸಿಕೊಂಡಿದ್ದ ಅವರು ಒಂದುಬಾರಿ ಪುದು ಜಿ.ಪಂ.ಚುನಾವಣೆಗೆ ಸ್ಪರ್ಧಿಸಿ ಸೋಲನ್ನನುಭವಿಸಿದ ಬಳಿಕ ರಾಜಕಾರಣದಿಂದ ದೂರ ಇದ್ದು,ರಾ.ಸ್ವ.ಸೇ. ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೇರಮಜಲು ಗ್ರಾ.ಪಂ.ಅಧ್ಯಕ್ಷರಾಗಿ,ಫರಂಗೀಪೇಟೆ ವ್ಯ.ಸೇ.ಸ.ಸಂಘದ ಅಧ್ಯಕ್ಷರಾಗಿಯೂ ಸುದೀರ್ಘ ಅವಧಿಯ ಕಾಲ ಸೇವೆ ಸಲ್ಲಿಸಿದ್ದರು.ಕೊಡ್ಮಾಣ್ ಶ್ರೀಶಾರದ ಪೂಜಾ ಸೇವಾ ಸಮಿತಿಯ ಗೌರವಾಧ್ಯಕ್ಷರಾಗಿ,ಕೊಡ್ಮಾಣ್ ಪ್ರೌಢಶಾಲಾ ಎಸ್ .ಡಿ.ಎಂ.ಸಿ ಸದಸ್ಯರಾಗಿಯು ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.
ಈ ಹಿಂದೆ ವಿಟ್ಲ ವಿಧಾನಸಭಾ ಕ್ಷೇತ್ರವಿದ್ದಾಗ ಬಿಜೆಪಿ ವಿಟ್ಮ ಕ್ಷೇತ್ರದ ಪ್ರಧಾನಕಾರ್ಯದರ್ಶಿಯಾಗಿದ್ದರು. ಸ್ಥಳೀಯವಾಗಿ ಯುವಕರ ಸಾಮಾಜಿಕ ಚಟುವಟಿಕೆಗೆ ಮಾರ್ಗದರ್ಶಕರು, ಪ್ರೇರಣಾಶಕ್ತಿಯಾಗಿದ್ದರು.ವಾಗ್ಮೀಯು ಆದ ಕಾಂತಪ್ಪ ಶೆಟ್ಟಿ ಅವರು ಹವ್ಯಾಸಿ ನಾಟಕಕಲಾವಿದರಾಗಿ ಕೆಲ ನಾಟಕಗಳಲ್ಲಿಯ ಬಣ್ಣಹಚ್ಚಿದ್ದರು.ಸಂಘದಲ್ಲಿ ಕಾಂತಪ್ಪಣ್ಣ ಎಂದೇ ಚಿರಪರಿಚಿತರಾಗಿದ್ದು, ತಮ್ಮ ಬದುಕನ್ನೇ ಸಂಘಕ್ಕೆ ಸಮರ್ಪಿಸಿದ ಸೇವಕರಾಗಿದ್ದಾರೆ.ಅವರು ಪತ್ನಿ ಹಾಗೂ ತಮ್ಮನ ಸಹಿತ ಬಂಧು ಬಳಗವನ್ನು ಅಗಲಿದ್ದಾರೆ.
ಮಂಗಳೂರಿನ ಆಸ್ಪತ್ರೆಯಿಂದಾಗಮಿಸಿದ ಮೃತ ಶರೀರವನ್ನು ಪರಂಗಿಪೇಟೆಯಿಂದ ಅವರ ಸ್ವ ಗ್ರಹದ ವರೆಗೆ ಮೆರವಣಿಗೆಯ ಮೂಲಕ ಸಾಗಿಸಲಾಯಿತು. ಈ ಸಂದರ್ಭ ನೂರಾರು ಮಂದಿ ಮೃತರ ಅಂತಿಮ ದರ್ಶನ ಪಡೆದರು.
ಇವರ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ,ಶಾಸಕರಾದ ಹರೀಶ್ ಪೂಂಜಾ,ಪ್ರತಾಪಸಿಂಹ ನಾಯಕ್,ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ.,ಬಿಜೆಪಿ ಪ್ರಮುಖರಾದ ಸತೀಶ್ ಕುಂಪಲ, ಸಂತೋಷ್ ಕುಮಾರ್ ಬೋಳಿಯಾರ್, ರಾಮದಾಸ್ ಬಂಟ್ವಾಳ,ಕಿಶೋರ್ ಭಂಡಾರಿ ಬೋಟ್ಯಾಡಿ,ಉಮೇಶ್ ಶೆಟ್ಟಿ ಬರ್ಕೆ, ರವೀಂದ್ರ ಕಂಬಳಿ , ರವೀಂದ್ರ ಶೆಟ್ಟಿ
ಉಳಿದೊಟ್ಟು ಸಹಿತ ಹಲವಾರು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು. ಸಂಜೆ ಅವರ ಮನೆ ಪಕ್ಕದ ಗದ್ದೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.