ಉರುಡಾಯಿ ಶ್ರೀ ಮುಖ್ಯಪ್ರಾಣ ಸ್ವಾಮಿ ದೇವಸ್ಥಾನ: ಮೇ 20-22: ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
ಬಂಟ್ವಾಳ: ಇಲ್ಲಿಯ ತಾಲೂಕಿನ ಕುಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ ಮುಖ್ಯಪ್ರಾಣ ಸ್ವಾಮಿ ದೇವಸ್ಥಾನ ಸುಮಾರು 1.50 ಕೋ.ರೂ.ವೆಚ್ಚದಲ್ಲಿ ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡಿದ್ದು, ಉಡುಪಿ ಸೋದೆ ವಾದಿರಾಜ ಮಠ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ವೇ.ಮೂ.ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಅವರ ಪೌರೋಹಿತ್ಯದಲ್ಲಿ ಮೇ 20 ರಿಂದ 22 ರವರೆಗೆ ಶ್ರೀ ಮುಖ್ಯಪ್ರಾಣ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ.

ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಮಂಗಳವಾರ ಶ್ರೀ ಕ್ಷೇತ್ರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ದೇವಸ್ಥಾನದ ಶಿಲಾಮಯ ಗರ್ಭಗುಡಿ, ಕೂಡು ಮಂಟಪದ ಮೇಲ್ಛಾವಣಿಯ ತಾಮ್ರದ ಹೊದಿಕೆ, ಸುತ್ತು ಪೌಳಿ, ಸಾನಿಧ್ಯ ದೈವಗಳಿಗೆ ಪ್ರತ್ಯೇಕ ಕಟ್ಟೆಗಳು, ಪಾಕಶಾಲೆ, ತೀರ್ಥ ಬಾವಿ, ನಾಗನಕಟ್ಟೆ, ಅರ್ಚಕರ ಕೊಠಡಿ, ತಡೆಗೋಡೆ, ಶೌಚಾಲಯದ ವ್ಯವಸ್ಥೆ ಮತ್ತು ದೇವಸ್ಥಾನಕ್ಕೆ ಬರುವ ರಸ್ತೆಯ ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದರು.

ಅತ್ಯಂತ ಪ್ರಾಚೀನವಾದ ಈ ದೇವಸ್ಥಾನವು ಅಜೀರ್ಣಾವಸ್ಥೆಯಲ್ಲಿದ್ದಾಗ ದೇವಸ್ಥಾನವನ್ನು ಪುನರ್ ನವೀಕರಣಗೊಳಿಸಬೇಕೆಂದು ಭಕ್ತಾದಿಗಳು ನಿಶ್ಚಯಿಸಿ ಬಳಿಕ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಸಲಾಗಿದೆ ಎಂದ ಅವರು ಊರ-ಪರವೂರಿನ ಭಕ್ತರ ಉದಾರ ದೇಣಿಗೆಯ ಜೊತೆಗೆ ಜಾಗದಾನ, ಶ್ರಮದಾನ, ಹೀಗೆ ಹಲವು ಬಗೆಯ ಸಹಕಾರಗಳೊಂದಿಗೆ ಶ್ರೀ ಮುಖ್ಯಪ್ರಾಣ ಸ್ವಾಮಿಯ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಕಾರ್ಯಗಳು ನಡೆದಿದ್ದು, ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ ಎಂದರು.
ಸುಮಾರು ಐದು ಶತಮಾನಗಳಿಂದ ಮೂಲ ಕುಂಞ ಕಾಯರ ವಂಶಸ್ಥರಿಂದ ಪೂಜಿಸಿಕೊಂಡು ಬಂದಿರುವ ಉರಾಡಾಯಿ ಶ್ರೀ ಮುಖ್ಯಪ್ರಾಣ ಸ್ವಾಮಿಯ ಸನ್ನಿಧಿಯು ಭಕ್ತರ ಪಾಲಿಗೆ ನಿಜಕ್ಕೂ ಅಭಯದಾಯಕ, ಈ ಪುಣ್ಯಕ್ಷೇತ್ರವು ವಗ್ಗ, ಕಾಡಬೆಟ್ಟು ರಸ್ತೆಯಿಂದ ಸುಮಾರು 3.7 ಕಿ.ಮೀ ದೂರದಲ್ಲಿ, ವಾಮದಪದವಿನಿಂದ 3 ಕಿ.ಮೀ ದೂರದಲ್ಲಿದೆ. ರಂಗಪೂಜೆ ಇಲ್ಲಿನ ವಿಶೇಷ ಪೂಜೆಯಲ್ಲಿ ಒಂದಾಗಿದೆ.ಹಾಗೆಯೇ ಶ್ರೀ ಮುಖ್ಯಪ್ರಾಣ ಸ್ವಾಮಿಗೆ ಅತ್ಯಂತ ಪ್ರಿಯವಾದ ಸೀಯಾಳಾಭಿಷೇಕದ ಸೇವೆಯು ಪ್ರತೀ ಶನಿವಾರದಂದು ನಡೆಯುತ್ತಿದೆ ಎಂದುಅವರು ವಿವರಿಸಿದರು.
ಮೇ 20ರಂದು ಬೆಳಗ್ಗೆ ತೋರಣ ಮುಹೂರ್ತ, ವಿವಿಧ ವೈದಿಕ ಕಾರ್ಯಕ್ರಮಗಳುಮಧ್ಯಾಹ್ನ ೩ ಗಂಟೆಯಿಂದ ವಿವಿಧೆಡೆಯಿಂದ ಸಂಗ್ರಹಿಸಿದ ಹಸಿರು ಹೊರೆ ಕಾಣಿಕೆ ಸಮರ್ಪಣೆಯ ಮೆರವಣಿಗೆ ರಾಮೊಟ್ಟು ಮೈದಾನದಿಂದ ದೇವಸ್ಥಾನಕ್ಕೆ ಆಗಮಿಸಲಿದೆ.
ಬ್ರಹ್ಮಕಲಶದ ಪ್ರತಿದಿನ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಜರಗಲಿದೆ. ಶ್ರೀ ಕ್ಷೇತ್ರಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಒಡಿಯೂರು ಶ್ರೀ, ಗುರುಪುರ ವಜ್ರದೇಹಿ ಶ್ರೀ , ಮಾಣಿಲ ಶ್ರೀ, ಸೋದೆ ವಾದಿರಾಜ ಮಠಾಧೀಶರು ಧಾರ್ಮಿಕಸಭೆಗಳಲ್ಲಿ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಧಾರ್ಮಿಕ ಮುಖಂಡರು,ಶಾಸಕರು,ಗಣ್ಯರು ಕೂಡ ಭಾಗವಹಿಸಲಿದ್ದಾರೆ ಎಂದರು.
ಮೇ 21ರಂದು ಬೆಳಗ್ಗೆ ಶ್ರೀ ದೇವರ ಬಿಂಬ ಪ್ರತಿಷ್ಠೆ, ನಾಗದೇವರ ಹಾಗೂ ದೈವಗಳ ಪ್ರತಿಷ್ಠಾ ಕಾರ್ಯ ನಡೆಯಲಿದ್ದು, ಮೇ 22ರಂದು ಬೆಳಗ್ಗೆ 10.30 ಕ್ಕೆ ಬ್ರಹ್ಮ ಕಲಶಾಭಿಷೇಕ ನಡೆಯಲಿದೆ ಎಂದರು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಬ್ರಹ್ಮಕಲಶೋತ್ಸವ ಸಮಿತಿ ವೀರೇಂದ್ರ ಅಮೀನ್ ವಗ್ಗ, ಕೋಶಾಽಕಾರಿ ಜಯರಾಮ ಕುಲಾಲ್ , ಸಂತೋಷ್ ಕುಮಾರ್ ಜೈನ್ ಮೇಗಿನ ಕಾಡಬೆಟ್ಟು , ದಯಾನಂದ ಕುಲಾಲ್, ಸುರೇಶ್ ಉರುಡಾಯಿ ಮತ್ತಿತರರು ಉಪಸ್ಥಿತರಿದ್ದರು.