ಭವಿಷ್ಯದಲ್ಲಿ ಗ್ಯಾಸ್ ಸಬ್ಸಿಡಿ ಪುನರಾರಂಭ : ನಳಿನ್
ಕೈಕಂಬ: ಉಚಿತ ಯೋಜನೆಗಳಿಂದ ಜನ ಸೋಮಾರಿಗಳಾಗುತ್ತಾರೆ ಎಂದು ಪ್ರತಿಪಾದಿಸುವ ಪಕ್ಷ ಬಿಜೆಪಿಯಾಗಿದ್ದರೂ, ಈ ಬಾರಿಯ ಚುನಾವಣಾ ಪ್ರಣಾಳಿಕೆಯಲ್ಲಿ ಕಡು ಬಡವರಿಗೆ ವರ್ಷಕ್ಕೆ ಮೂರು ಗ್ಯಾಸ್ ಸಿಲಿಂಡರ್ ಉಚಿತ ಕೊಡುವ ಭರವಸೆ ನೀಡಿದ್ದೇವೆ. ಭವಿಷ್ಯದಲ್ಲಿ ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿ ಪುನರಾರಂಭವಾಗಲಿದೆ ಎಂದು ಬಿಜೆಪಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉತ್ತರಿಸಿದರು.
ಮಂಗಳೂರು ನಗರ ಉತ್ತರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ಅವರ ಕಾವೂರಿನಲ್ಲಿರುವ ಚುನಾವಣಾ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಂಆರ್‌ಪಿಎಲ್ ಇರಲಿ ಅಥವಾ ಅನ್ಯ ಕೈಗಾರಿಕೋದ್ಯಮ ಇರಲಿ, ಮುಂದಿನ ದಿನಗಳಲ್ಲಿ ಅಲ್ಲೆಲ್ಲ ಸ್ಥಳೀಯರಿಗೆ ಆದ್ಯತೆ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೂಕ್ತ ಕಾನೂನು ರೂಪಿಸಲಿದೆ. ಉದ್ಯಮ, ಕೃಷಿಗೆ ಆದ್ಯತೆ ನೀಡಲಾಗಿದ್ದು, ಇವು ಪಕ್ಷದ ಮುಂದುರಿಸಲಿರುವ ನೀತಿಯಾಗಿದೆ ಎಂದರು.
ಮಂಗಳೂರು ನಗರ ಉತ್ತರದ ಶಾಸಕ ಡಾ. ಭರತ್ ಶೆಟ್ಟಿ ಅವರಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಅಭೂತಪೂರ್ವ ಅಭಿವೃದ್ಧಿಯಾಗಿದೆ. ಕ್ರಿಯಾತ್ಮಕ ಮತ್ತು ಜನರ ಪ್ರೀತಿಗೆ ಪಾತ್ರರಾಗಿರುವ ಡಾ. ಶೆಟ್ಟಿ ಅವರು ಈ ಬಾರಿ ೫೦,೦೦೦ಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೋಮುವಾದ, ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ. ಅಭಿವೃದ್ಧಿಯೊಂದಿಗೆ ಸಮಾಜದಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗಬೇಕಿದ್ದಲ್ಲಿ ಮತ್ತೊಮ್ಮೆ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಈ ವಿಷಯದಲ್ಲಿ ಜನತೆಯ ಒಲವು ಪಕ್ಷದ ಪರವಾಗಿದೆ ಎಂದರು ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರು ನಗರ ಉತ್ತರ ಬಿಜೆಪಿ ಮಂಡಲದ ಅಧ್ಯಕ್ಷ ತಿಲಕ್‌ರಾಜ್ ಕೃಷ್ಣಾಪುರ ಸ್ವಾಗತಿಸಿದರು. ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರಿ, ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ, ಪೂಜಾ ಪೈ, ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ಕೃಷ್ಣದಾಸ್, ಶರತ್ ಶೆಟ್ಟಿ, ಕೃಷ್ಣದಾಸ್ ಮತ್ತಿತರರು ಉಪಸ್ಥಿತರಿದ್ದರು.