ಬಿ.ಸಿ.ರೋಡಿನಲ್ಲಿ ಬಿಜೆಪಿ ವಿಜಯೋತ್ಸವ ಮೆರವಣಿಗೆ, ಕುಣಿದು ಕುಪ್ಪಳಿಸಿದ ಕಾರ್ಯಕರ್ತರು
ಬಂಟ್ವಾಳ: ರಾಜೇಶ್ ನಾಯ್ಕ್ ಅವರ ಗೆಲುವಿನ ಹಿನ್ನಲೆಯಲ್ಲಿ ಬಿ.ಸಿ.ರೋಡಿನ ರಾಜಾರಸ್ತೆಯಲ್ಲಿ ಕಾರ್ಯಕರ್ತರಿಂದ ಅದ್ದೂರಿಯ ವಿಜಯೋತ್ಸವದ ಮೆರವಣಿಗೆ ನಡೆಯಿತು.ಇದಕ್ಕು ಮೊದಲು ಅವರು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳಕ್ಕೆ ತೆರಳಿ ದೇವರ ಸನ್ನಿಧಿಯಲ್ಲಿ ಪ್ರಮಾಣಪತ್ರವನ್ನಿಟ್ಟು ಪ್ರಾರ್ಥನೆ ಸಲ್ಲಿಸಿದರು.ಬಳಿಕ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿ ಶಾಸಕ ರಾಜೇಶ್ ನಾಯ್ಕ್ ಅವರನ್ನು ಕಾರ್ಯಕರ್ತರು ಜಯಘೋಷದೊಂದಿಗೆ ಸ್ವಾಗತಿಸಿದರು.
ಇಲ್ಲಿಂದ ಪಕ್ಷದ ಕಚೇರಿವರೆಗೆ ಶಾಸಕ ರಾಜೇಶ್ ನಾಯ್ಕ್ ಅವರನ್ನು ತೆರೆದ ವಾಹನದಲ್ಲಿ ಕರೆತಂದರು.ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ,ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಉದ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು,ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಸಾಥ್ ನೀಡಿದರು.
ಕುಣಿದು ಕುಪ್ಪಳಿಸಿದ ಕಾರ್ಯಕರ್ತರು:
ವಿಜಯೋತ್ಸವದಲ್ಲಿ ಸಹಸ್ರಾರು ಕಾರ್ಯಕರ್ತರು ನಾಸಿಕ್ ಬ್ಯಾಂಡ್ ,ಬಜರಂಗಬಲಿ ಹಾಡಿಗೆ ಕುಣಿದು ಕುಪ್ಪಳಿಸಿದರು.ಭಜರಂಗಬಲಿ,ರಾಜೇಶ್ ನಾಯ್ಕ್,ಪ್ರಧಾನಿ ಮೋದಿಯವರಿಗೆ ಜೈಕಾರ ಹಾಕಿದರು.ಪಕ್ಷದ ಕಚೇರಿ ಮುಂಭಾಗದಲ್ಲಿ ಯುವ ಕಾರ್ಯಕರ್ತರ ಸಮೂಹ ಶಾಸಕ ರಾಜೇಶ್ ನಾಯ್ಕ್ ಅವರನ್ನು ಎತ್ತಿ ಕುಣಿದರು. ವಿಜಯೋತ್ಸವ ಮೆರವಣಿಗೆಯ ದಾರಿಯುದ್ದಕ್ಕು ಅಭಿಮಾನಿಗಳು, ಸಾರ್ವಜನಿಕರು ಶಾಲು,ಹಾರ ಹಾಕಿ ಅಭಿನಂದನೆ ಸಲ್ಲಿಸಿದರು.
ಮಹಿಳೆಯರು ಆರತಿ ಬೆಳಗಿದರು.ಈ ಸಂದರ್ಭ ರಾಜೇಶ್ ನಾಯ್ಕ್ ಅವರ ಪತ್ನಿ ಉಷಾ ನಾಯ್ಕ್ ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು. ಬಿಜೆಪಿ ಮುಖಂಡರಾದ ದೇವದಾಸ ಶೆಟ್ಟಿ,ಡೊಂಬಯ ಅರಳ,ರವೀಶ್ ಶೆಟ್ಟಿ,ಗೋವಿಂದ ಪ್ರಭು,ಸುದರ್ಶನ್ ಬಜ,ತುಂಗಪ್ಪ ಬಂಗೇರ, ಸುಲೋಚನಾ ಜಿ.ಕೆ.ಭಟ್,ಭಾರತಿ ಶೆಟ್ಟಿ,ಹರ್ಷಿಣಿ ಪುಪ್ಪಾನಂದ, ಸೀಮಾ ಮಾಧವ, ಆನಂದ ಶಂಭೂರು,ಪುರುಷೋತ್ತಮ ಸಾಲಿಯಾನ್,ಪ್ರಕಾಶ್ ಅಂಚನ್,ಸುರೇಶ್ ಕೋಟ್ಯಾನ್, ರಮಾನಾಥ ರಾಯಿ,ಸಂದೇಶ್ ಶೆಟ್ಟಿ ಪ್ರಭಾಕರ ಪ್ರಭು,ಗಣೇಶ್ ರೈ ಮಾಣಿ,ನಂದರಾಮ ರೈ,ಉಮೇಶ್ ಗೌಡ ,ರಶ್ಮಿತ್ ಶೆಟ್ಟಿ,ಸುರೇಶ್ ಮೈರ, ಪ್ರದೀಪ್ ಅಜ್ಜಿಬೆಟ್ಟು, ಕೃಷ್ಣಪ್ಪ ಪೂಜಾರಿ ದೋಟ,ಕುಮಾರ ಆಳ್ವ, ವಜ್ರನಾಭ ಕಲ್ಲಡ್ಕಮೊದಲಾದವರಿದ್ದರು.
ಕಾರ್ಯಕರ್ತರ,ಪ್ರಮುಖರ ಶ್ರಮ ಗೆಲುವಿಗೆ ಕಾರಣ .
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು,ಪಕ್ಷದ ಕಾರ್ಯಕರ್ತರ,ಪ್ರಮುಖರ ಶ್ರಮ,ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯ ಮತ್ತು ಶಾಂತಿಯ ಬಂಟ್ವಾಳದಿಂದಾಗಿ ಗೆಲುವಿಗೆ ಕಾರಣವಾಗಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಇಲ್ಲದಿದ್ದರೂ ವಿರೋಧ ಪಕ್ಷದ ಶಾಸಕನಾಗಿ ಯಾವ್ಯಾವ ಮೂಲಗಳಿಂದ ಅನುದಾನ ತರಲು ಸಾಧ್ಯವೋ ಅದೆಲ್ಲವನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆಯಿತ್ತರು.
ತನ್ನ ಗೆಲುವಿಗೆ ಹಗಲಿರುಳು ಶ್ರಮಿಸಿದ ಕಾರ್ಯಕರ್ತರು,ಪ್ರಮುಖರು ಹಾಗು ಹಿತೈಷಿಗಳಿಗೆ ಅವರು ಈ ಸಂದರ್ಭ ಕೃತಜ್ಞತೆ ಸಲ್ಲಿಸಿದರು.