ಮುತ್ತೂರು : ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವರದಿ
ಪ್ರಕಟಿಸಿದ ವೆಬ್‌ಸೈಟ್ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯ
ಕೈಕಂಬ: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮುತ್ತೂರು ವ್ಯಾಪ್ತಿಯಲ್ಲಿ ಹಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ' ಎಂಬ ಒಕ್ಕಣೆಯ ಸುಳ್ಳು ವರದಿ ಪ್ರಕಟಿಸಿ, ಬಿಜೆಪಿ ಪಕ್ಷದ ಅಭ್ಯರ್ಥಿಯ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಯತ್ನಿಸುತ್ತಿರುವ
ಮೀಡಿಯಾ ಒನ್ ಕನ್ನಡ’ ವೆಬ್‌ಸೈಟ್ ಹಾಗೂ ಅಂತಹ ಜಾಲತಾಣಕ್ಕೆ ಪ್ರಚೋದನೆ ನೀಡಿರುವ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಯವರಲ್ಲಿ ಬಿಜೆಪಿ ಆಗ್ರಹಿಸಿದೆ.

ವಾಸ್ತವವಾಗಿ ಮುತ್ತೂರಿನಲ್ಲಿ ಬಿಜೆಪಿಗರು ಪಕ್ಷಾಂತರ ಮಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ವರದಿ ಮಾಡುತ್ತಿರುವ ಮೀಡಿಯಾ ಒನ್ ಕನ್ನಡ ವೆಬ್‌ಸೈಟ್ ತನ್ನ ಇತ್ತೀಚಿನ ವರದಿಯೊಂದರಲ್ಲಿ ಬಿಜೆಪಿ ಮತ್ತು ಬಿಜೆಪಿ ಅಭ್ಯರ್ಥಿ ಮನೋಬಲ ಕುಗ್ಗಿಸುವಂತಹ ಕಪೋಲಕಲ್ಪಿತ ಸುದ್ದಿ ಪ್ರಕಟಿಸಿದೆ ಎಂದು ೨೦೨ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಏಜೆಂಟ್ ಸುಜಯ ಬಿ., ಶೆಟ್ಟಿ ಅವರು ಮಂಗಳೂರು ನಗರ ಉತ್ತರ ಚುನಾವಣಾಧಿಕಾರಿಯವರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ವೈಬ್‌ಸೈಟ್‌ಗಳ ಮೂಲಕ ಸುಳ್ಳು ಸುದ್ದಿ ಪ್ರಕಟಿಸುವುದರೊಂದಿಗೆ ಮತದಾರರಲ್ಲಿ ಗೊಂದಲ ಸೃಷ್ಟಿಸಿ, ಅದರ ಲಾಭ ಗಳಿಸುವ ಉದ್ದೇಶ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಮತ್ತು ಅವರ ಬಳಗದವರಲ್ಲಿರುವಂತೆ ಕಂಡು ಬಂದಿದೆ. ಇಂತಹ ಸಂಗತಿಗಳಿಗಹೆ ಬಿಜೆಪಿ ಆಸ್ಪದ ನೀಡುವುದಿಲ್ಲ. ಈ ವಿಷಯದಲ್ಲಿ ಚುನಾವಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಗರು ಒತ್ತಾಯಿಸಿದ್ದಾರೆ.