ಮಂಗಳೂರು ಉತ್ತರದಲ್ಲಿ ದಾಖಲೆ ಅಂತರದ ಗೆಲುವಿನ ವಿಶ್ವಾಸ’
ಅಭಿವೃದ್ಧಿಯೊಂದಿಗೆ ಉದ್ಯೋಗ ಸೃಷ್ಟಿ ಮುಂದಿನ ಗುರಿ : ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ
ಕೈಕಂಬ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ, ಪ್ರಕೃತಿ ವಿಕೋಪ ಮತ್ತು ಕರೋನಾ ಮಹಾಮಾರಿಯಿಂದ ಅಧಿಕಾರಾವಧಿಯ ಒಟ್ಟು ೫ ವರ್ಷಗಳಲ್ಲಿ ಸಿಕ್ಕಿರುವ ಎರಡೂವರೆ ವರ್ಷಗಳ ಅಲ್ಪಾವಧಿಯಲ್ಲಿ, ಹಿಂದಿನ ಚುನಾವಣೆ ವೇಳೆ ಕ್ಷೇತ್ರವಾಸಿಗಳಿಗೆ ನೀಡಿರುವ ಭರವಸೆಯಂತೆ ಕುಡಿಯುವ ನೀರು, ರಸ್ತೆ ಸಂಪರ್ಕ, ಸೇತುವೆ, ಆರೋಗ್ಯ ಸೇವೆಯಂತಹ ಮೂಲಸೌಕರ್ಯ ಒದಗಿಸುವಲ್ಲಿ ಯಶಸ್ವಿಯಾಗಿರುವ ಬಗ್ಗೆ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮತದಾರ ಬಾಂಧವರು ಹೇಳುವಂತಾಗಿದೆ ಎಂಬ ಸಮಾಧಾನವಿದೆ ಎಂದು ಈ ಕ್ಷೇತ್ರದಿಂದ ೨ನೇ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಾ ಕಣಕ್ಕಿಳಿದಿರುವ ಡಾ. ಭರತ್ ಶೆಟ್ಟಿ ಹೇಳಿದರು.

ಎರಡೂವರೆ ವರ್ಷಗಳ ಅವಧಿಯಲ್ಲಿ ಸುಮಾರು ೨,೨೫೦ ಕೋಟಿ ರೂ ಅನುದಾನ ತರಲಾಗಿದ್ದು, ಬಹುತೇಕ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕೆಲವು ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಗ್ರಾಮೀಣ ಭಾಗದಲ್ಲಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ಕ್ರಮವಾಗಿ ೨೦೦ ಕೋಟಿ ರೂ ಅಧಿಕ ಅನುದಾನದ ಜಲ್ ಜೀವನ್ ಮಿಶನ್ ಮತ್ತು ಜಲಸಿರಿ ಯೋಜನೆ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಕಾರ್ಯಗತವಾಗಲಿದೆ. ಕೆರೆಗಳ ಅಭಿವೃದ್ಧಿ, ಅಂತರ್ಜಲ ವೃದ್ಧಿ ಯೋಜನೆಗಳು ಪ್ರಗತಿ ಹಂತದಲ್ಲಿವೆ.

ಜನಸ್ಪಂದನ ಕಾರ್ಯಕ್ರಮ :
ಮಂಗಳೂರು ನಗರ ಉತ್ತರ ಕ್ಷೇತ್ರದ ೮ ಪ್ರಮುಖ ಕಡೆಗಳಲ್ಲಿ ನಡೆಸಲಾದ ಜನಸ್ಪಂದನ ಕಾರ್ಯಕ್ರಮದ ಮೂಲಕ ಜನರಿಗೆ ಒಂದೇ ಸೂರಿನಡಿ ಬಹುತೇಕ ಎಲ್ಲ ಸರ್ಕಾರಿ ಸೇವೆ ತಲುಪಿಸುವ ಪ್ರಯತ್ನ ನಡೆಸಲಾಗಿದೆ. ಜನಸಾಮಾನ್ಯರು ಸರ್ಕಾರಿ ಕಚೇರಿಗಳಿಗೆ ನಿರಂತರ ಅಲೆದಾಡುವ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ಸಾವಿರಾರು ಬಡಜನರು ಇದರ ಲಾಭ ಪಡೆದಿಕೊಂಡಿರುವುದು ನೆಮ್ಮದಿಯ ಸಂಗತಿ.

ಬೀಚ್ ಪ್ರವಾಸೋದ್ಯಮಕ್ಕೆ ಆದ್ಯತೆ :
ಮಂಗಳೂರು ನಗರ ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಬೀಚ್ ಪ್ರದೇಶ ಇದ್ದರೂ, ಇತ್ತೀಚಿನವರೆಗೂ ಅವು ನಿರ್ಲಕ್ಷö್ಯಕ್ಕೊಳಗಾಗಿತ್ತು. ಆದರೆ ಈ ಬಾರಿ ಸಾವಿರಾರು ಕೋಟಿ ರೂ ಅನುದಾನದಲ್ಲಿ ನಾಯರ್ ಕುದ್ರು ದ್ವೀಪ, ತಣ್ಣೀರುಬಾವಿ, ಪಣಂಬೂರು ಬೀಚ್(ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ) ಅಭಿವೃದ್ಧಿ ಹೊಂದುತ್ತಿದೆ. ಮುಂದಿನ ದಿನಗಳಲ್ಲಿ ಈ ಕೆಲಸಗಳು ಕರಾವಳಿ ಭಾಗದ ಪ್ರವಾಸೋದ್ಯಮದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿವೆ. ಜೊತೆಗೆ ಈ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗಲಿವೆ.

ಉದ್ಯೋಗ ಸೃಷ್ಟಿ :
ಗ್ರಾಮೀಣ ಮತ್ತು ನಗರ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಯ ಬೆನ್ನಲ್ಲೇ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಕೆಲವು ಭಾಗಗಳಲ್ಲಿ ಉದ್ಯೋಗ ಸೃಷ್ಟಿಗೆ ಚಾಲನೆ ನೀಡಲಾಗಿದೆ. ಕುಳಾಯಿಯಲ್ಲಿ ಸರ್ವಋತು ಬಂದರು ಜೆಟ್ಟಿ ನಿರ್ಮಾಣ, ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಯಂತಹ ಹಲವು ಯೋಜನೆಗಳು ಕೈಗೂಡಿದಲ್ಲಿ ಈ ಭಾಗದ ಜನರಿಗೆ ಸುಲಭದಲ್ಲಿ ಉದ್ಯೋಗ ಲಭಿಸಲಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಕೈಗಾರಿಕೆಗಳು ಕ್ಷೇತ್ರದ ವ್ಯಾಪ್ತಿಯಲ್ಲಿ ತಲೆ ಎತ್ತಲಿದ್ದು, ಅವುಗಳ ಆರಂಭಕ್ಕೆ ಒಂದು ವರ್ಷದ ಹಿಂದೆಯೇ ಮಾತುಕತೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಅಭಿವೃದ್ಧಿಯ ಜೊತೆಜೊತೆಗೆ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಇದು ಪ್ರಸಕ್ತ ಅಗತ್ಯಗಳಲ್ಲಿ ಒಂದು ಎಂದು ಡಾ. ಭರತ್ ಶೆಟ್ಟಿ ಮಾಧ್ಯಮಕ್ಕೆ ತಿಳಿಸಿದರು.

ಬೃಹತ್ ಅಂತರದ ಗೆಲುವಿಗೆ ಪ್ರಯತ್ನ :
ಹಿಂದಿನ ಚುನಾವಣೆಯಲ್ಲಿ ೨೬,೦೦೦ ಮತಗಳ ಅಂತರದಿAದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲಾಗಿದ್ದರೆ, ಈ ಬಾರಿ ಈ ಅಂತರ ೫೦-೫೫ ಸಾವಿರ ಮತಗಳಿಗೆ ವಿಸ್ತರಿಸಲು ಪ್ರಯತ್ನ ಮುಂದುವರಿದಿದೆ. ಬಿಜೆಪಿಗೆ ಕಾರ್ಯಕರ್ತರೇ ಆಸ್ತಿಯಾಗಿರುವಾಗ ಇಲ್ಲಿ ಬಿಜೆಪಿಗೆ ಗೆಲುವಿನ ಭೀತಿ ಇಲ್ಲ. ದಾಖಲೆ ಪ್ರಮಾಣದ ಮತ ಗಳಿಸುವ ಗುರಿ ಹೊಂದಲಾಗಿದ್ದು, ಇಂತಹ ಗೆಲುವಿನಿಂದ ಜನಸೇವೆಗೆ ಮತ್ತಷ್ಟು ಉತ್ತೇಜನ ಸಿಕ್ಕಂತಾಗಲಿದೆ ಎಂದಿರುವ ಮಾಜಿ ಶಾಸಕ ಡಾ. ಶೆಟ್ಟಿ ಅವರು, “ಚುನಾವಣೆ ಬರಲಿ, ಹೋಗಲಿ ಹಿಂದೂತ್ವ ಉದ್ಧರಿಸುವ, ಗೋಹತ್ಯೆ ನಿರ್ಮೂಲನೆಯ ಮತ್ತು ಕೋಮುವಾದಿ ಶಕ್ತಿಗಳ ಹೆಡೆಮುರಿ ಕಟ್ಟಿ ಹಾಕುವಂತಹ ಕೆಲಸದ ಮುಂಚೂಣಿಯಲ್ಲಿ ಇರುತ್ತೇನೆ. ಈ ವಿಷಯದಲ್ಲಿ ಯಾವತ್ತೂ ರಾಜಿ ಇಲ್ಲ” ಎಂದರು.

ಬಿರುಸಿನ ಪ್ರಚಾರ :
ದಿನದ ೧೮ ತಾಸು ಬಿರುಸಿನ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಬಿಜೆಪಿ ಭರವಸೆಯ ಅಭ್ಯರ್ಥಿ ಡಾ. ಭರತ್ ಶೆಟ್ಟಿ, ಕ್ಷೇತ್ರ ವ್ಯಾಪ್ತಿಯ ಬಹುತೇಕ ಎಲ್ಲೆಡೆ ಮನೆಮನೆ ಭೇಟಿ ನೀಡಿ, ಒಂದು ಸುತ್ತಿನ ಮತ ಯಾಚನೆ ಕಾರ್ಯ ಮುಗಿಸಿದ್ದಾರೆ. ಎಲ್ಲೆಡೆ ಅಭಿಮಾನದ ಮಾತುಗಳು ಸ್ವಾಗತಿಸಿವೆ. ಕ್ಷೇತ್ರ ವ್ಯಾಪ್ತಿಯ ೭ ಮಹಾಶಕ್ತಿ ಕೇಂದ್ರಗಳು ಹಾಗೂ ಮನಪಾ ಪ್ರದೇಶಗಳಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಅವರು ಸುರತ್ಕಲ್‌ನಲ್ಲಿ ಈಗಾಗಲೇ ಬೃಹತ್ ರೋಡ್ ಶೋ ನಡೆಸಿದ್ದಾರೆ. ಪ್ರಚಾರದ ಉದ್ದಗಲಕ್ಕೂ ಯುವ ಜನರು ಡಾ. ಭರತ್ ಶೆಟ್ಟಿ ಅವರ ಶಾಸಕಾವಧಿಯ ಕಾರ್ಯಸಾಧನೆ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುತ್ತಲೇ, ಮುಂದಿನ ಅವಧಿಯಲ್ಲಿ ಸ್ಥಳೀಯರಿಗೆ ಉದ್ಯೋಗ ಲಭಿಸುವ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಯ ಕೆಲಸ ಮಾಡುವಂತಾಗಲಿ ಹಾರೈಸಿದ್ದಾರೆ.