ಸುಳ್ಳು, ವದಂತಿಗಳೇ ಬಿಜೆಪಿ ಬಂಡವಾಳ : ರಮಾನಾಥ ರೈ
ಬಂಟ್ವಾಳ : ಸುಳ್ಳು, ವದಂತಿಗಳೇ ಬಿಜೆಪಿ ಬಂಡವಾಳ. ಆ ಮೂಲಕವೇ ಅಧಿಕಾರದಲ್ಲಿ ಮುಂದುವರಿಯಬಹುದು ಎಂದು ಅದು ಹಗಲು ಕನಸು ಕಾಣುತ್ತಿದೆ ಎಂದು ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಗೋಳ್ತಮಜಲು ವಲಯ ಕಾಂಗ್ರೆಸ್ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿ,ಜನರು ಈ ಬಾರಿ ಕಾಂಗ್ರೆಸ್ ಗೆ ಮತ ಚಲಾಯಿಸುವ ಬಗ್ಗೆ ಈಗಾಗಲೇ ನಿರ್ಧರಿಸಿದ್ದಾರೆ ಎಂದರು.
ನನ್ನ ಅಧಿಕಾರಾವಧಿಯಲ್ಲಾದ ಅಭಿವೃದ್ಧಿ ಕಾರ್ಯ ಮತ್ತು ಕಳೆದ ಐದು ವರ್ಷದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯವನ್ನು ಜನರು ತುಲನೆ ಮಾಡಿ ನೋಡುತ್ತಿದ್ದಾರೆ. ನನ್ನ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿದರೆ, ಕಳೆದ ಐದು ವರ್ಷದಲ್ಲಿ ಬಿಜೆಪಿಗರು ಮಾಡಿರುವ ಸಾಧನೆ ಶೂನ್ಯವೆಂದು ಜನರು ಕ್ಷೇತ್ರಾದ್ಯಂತ ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಮತ್ತೆ ಕಾಂಗ್ರೆಸ್ ಗೆಲ್ಲಿಸುವುದೊಂದೇ ಇದಕ್ಕಿರುವ ಸೂಕ್ತ ಪರಿಹಾರ ಎಂಬುದಾಗಿ ಜನತೆ ನಿರ್ಧರಿಸಿದ್ದಾರೆ ಎಂದು ರೈ ತಿಳಿಸಿದರು.
ಕ್ಷೇತ್ರದ ಜನತೆ ಸಾಕಷ್ಟು ವಿದ್ಯಾವಂತರು, ಬುದ್ಧಿವಂತರಿದ್ದಾರೆ. ಬಿಜೆಪಿಗರು ಪ್ರತಿ ಬಾರಿ ಇವರನ್ನು ಯಾಮಾರಿಸಲು ಸಾಧ್ಯವಿಲ್ಲ. ಈ ಬಾರಿ ಖಚಿತವಾಗಿ ಅಭಿವೃದ್ಧಿ ಪರ ನಾಯಕತ್ವದ ಜೊತೆ ಜನತೆ ನಿಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೆ.ಪಿ. ಸಿ.ಸಿ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ವಲಯ ಅಧ್ಯಕ್ಷ ಹುಸೇನ್, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಅಂಡೇಲು ಮೋನು, ಹಿರಿಯ ಕಾಂಗ್ರೆಸಿಗ ಇಬ್ರಾಹೀಂ, ಗೋಳ್ತಮಜಲು ಯುವ ಕಾಂಗ್ರೆಸ್ ಅಧ್ಯಕ್ಷ ಜಾಫರ್, ವಲಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಕಲ್ಲಡ್ಕ, ವಲಯ ಯುವ ಕಾಂಗ್ರೆಸ್ ನ ಇಬ್ರಾಹೀಂ ಕೆ.ಸಿ., ನಝೀರ್ ಕಲ್ಲಡ್ಕ, ಅಶ್ರಫ್ ಮದಕ, ಸಿದ್ದೀಕ್ ಜಿ.ಎಸ್., ಸೂರಜ್ ಮತ್ತಿತರರು ಉಪಸ್ಥಿತರಿದ್ದರು.