ಮೂಡುಬಿದಿರೆಯಲ್ಲಿ ತುಳು ಮಹಾಕೂಟ 2023
ಮೂಡುಬಿದಿರೆ:ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಹಕ್ಕೊತ್ತಾಯಕ್ಕೆ ಹಿನ್ನೆಲೆಯಾಗಿ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಬೇಕು ಎಂಬುದನ್ನು ಪುಷ್ಟೀಕರಿಸಲು ರಚಿಸಲಾದ ಸಮಿತಿಯ ಅಧ್ಯಕ್ಷನಾಗಿ ತಜ್ಞರು, ಹಿರಿಯರು, ಸಂಘಟನೆಗಳು,ಆಸಕ್ತರೆಲ್ಲರೊಂದಿಗೆ ಹಲವು ಬಾರಿ ಚರ್ಚಿಸಿ, ಜಾನಪದ, ಸಾಹಿತ್ಯ, ಶಿಕ್ಷಣ, ಸಂಶೋಧನೆ, ರಂಗಭೂಮಿ, ಸಿನೆಮಾ, ಉದ್ಯಮ ಸಹಿತ ಎಲ್ಲ ರಂಗಗಳಲ್ಲಿ ತುಳುವರ ಸಾಧನೆ ಮಹತ್ತರವಾಗಿರುವುದನ್ನು ದಾಖಲಿಸಲಾಗಿದೆ ಎಂದು ತಿಳಿಸಿದ ಮೋಹನ ಆಳ್ವರು ಜನಪ್ರತಿನಿಧಿಗಳು, ಅಧಿಕಾರಿಗಳು, ಕಾನೂನು ತಜ್ಞರು ಮನವರಿಕೆ ಮಾಡಿಕೊಂಡು ಇನ್ನಾದರೂ ನಮ್ಮ ಭಾಷೆಗೆ ಮಾನ್ಯತೆ ನೀಡಬೇಕಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು.
ಅಖಿಲ ಭಾರತ ತುಳು ಒಕ್ಕೂಟ ಮತ್ತು ತುಳುಕೂಟ ಬೆದ್ರ ಇವುಗಳ ಸಹಭಾಗಿತ್ವದಲ್ಲಿ ಮೂಡುಬಿದಿರೆಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕನ್ನಡ ಭವನದಲ್ಲಿ ರವಿವಾರ ನಡೆದ ಆಖಿಲ ಭಾರತ ತುಳು ಒಕ್ಕೂಟದ ದೇಶ ವಿದೇಶಗಳ ಘಟಕಗಳ ಸರ್ವ ಸದಸ್ಯರ ಪಾಲ್ಗೊಳ್ಳುವಿಕೆಯ, ತುಳು ಸಂಘಟಕರ ಸಮ್ಮಿಲನ ತುಳು ಮಹಾ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಅಧ್ಯಕ್ಷತೆವಹಿಸಿದರು.
ತುಳು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಪ್ರಧಾನ ಕಾರ್ಯದರ್ಶಿ ಮೂಲ್ಕಿ ಕರುಣಾಕರ ಶೆಟ್ಟಿ, ಕೋಶಾಧಿಕಾರಿ ಎಂ. ಚಂದ್ರಹಾಸ ದೇವಾಡಿಗ, ಉಪಾಧ್ಯಕ್ಷರಾದ ಬಿ. ಜಯಕರ ಶೆಟ್ಟಿ, ದಾಮೋದರ ನಿಸರ್ಗ, ವಿಜಯಲಕ್ಷ್ಮೀ ಬಿ. ಶೆಟ್ಟಿ, ತಾರಾನಾಥ ಶೆಟ್ಟಿ ಬೋಳಾರ, ಕಾರ್ಯದರ್ಶಿ ಪಿ.ಎ. ಪೂಜಾರಿ, ಹರೀಶ್ ನೀರ್‌ಮಾರ್ಗ, ಡಾ. ರಾಜೇಶ್ ಆಳ್ವ ಬದಿಯಡ್ಕ ಸಹಿತ ಸಮಿತಿ ಸದಸ್ಯರು, ದೇಶ ವಿದೇಶಗಳಲ್ಲಿರುವ 36 ತುಳು ಕೂಟಗಳು, 14 ಆಮಂತ್ರಿತ ತುಳು ಕೂಟಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಎಲ್ಲ ಘಟಕಗಳು ಮತ್ತು ಕೂಟಗಳ ಕಾರ್ಯ ಚಟುವಟಿಕೆಗಳ ಮಾಹಿತಿಗಳನ್ನು ಸಾದರ ಪಡಿಸಲಾಯಿತು. ಒಕ್ಕೂಟದ ಹಿರಿಯ ಚೇತನಗಳಾದ ಎಸ್. ಆರ್. ಹೆಗ್ಡೆ, ಅಡ್ಯಾರ್ ಮಹಾಬಲ ಶೆಟ್ಟಿ, ನಿಟ್ಟೆ ಶಶಿಧರ ಶೆಟ್ಟಿ ಇವರ ಸಂಸ್ಮರಣೆಗೈಯಲಾಯಿತು. ವಿವಿಧ ಕೂಟಗಳಿಂದ ಸಂವಾದ ನಡೆಯಿತು. ಪೆರ್ಮೆದ ತುಳುವೆರ್ ಪುರಸ್ಕೃತ ಸರ್ವೋತ್ತಮ ಶೆಟ್ಟಿ ಅಬುದಾಬಿ, ಧರ್ಮಪಾಲ್ ಯು. ದೇವಾಡಿಗ ಮುಂಬೈ, ಡಾ. ಭಾಸ್ಕರಾನಂದ ಕುಮಾರ್ ಕಟೀಲು, ದಿವಾಕರ ಎಸ್. ಶೆಟ್ಟಿ ಸಾಂಗ್ಲಿ, ಎಂ. ರತ್ನಕುಮಾರ್ ಮಂಗಳೂರು ಮತ್ತು ಬಿ.ಎನ್. ಹರೀಶ್ ಬೋಳೂರು ಇವರನ್ನು ಸಮ್ಮಾನಿಸಲಾಯಿತು.
ತುಳು ಕೂಟ ಬೆದ್ರದ ಅಧ್ಯಕ್ಷ ಧನಕೀರ್ತಿ ಬಲಿಪ ಅವರು ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮುಲ್ಕಿ ಕರುಣಾಕರ ಶೆಟ್ಟಿ ವಂದಿಸಿದರು.ಅಖಿಲ ಭಾರತ ತುಳು ಒಕ್ಕೂಟ ಮತ್ತು ತುಳುಕೂಟ ಬೆದ್ರ ಇವುಗಳ ಸಹಭಾಗಿತ್ವದಲ್ಲಿ ಮೂಡುಬಿದಿರೆಯ ಕನ್ನಡ ಭವನದಲ್ಲಿ ಶನಿವಾರ ನಡೆದ `ತುಳು ಮಹಾ ಕೂಟ’ ಕಾರ್ಯಕ್ರಮವನ್ನು ಡಾ. ಎಂ. ಮೋಹನ ಆಳ್ವರು ಉದ್ಘಾಟಿಸಿದರು.