ಫರಂಗಿಪೇಟೆ: ಅಕ್ರಮ ಅಕ್ಕಿ ಸಾಗಾಟ ಪತ್ತೆ
ಬಂಟ್ವಾಳ: ಲಾರಿಯೊಂದರಲ್ಲಿ ಅಕ್ರಮವಾಗಿ ಲಕ್ಷಾಂತರ ರೂ. ಮೌಲ್ಯದ ಅಕ್ಕಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರು ಫರಂಗಿಪೇಟೆಯಲ್ಲಿ ಶುಕ್ರವಾರ ರಾತ್ರಿ ಪತ್ತೆ ಹಚ್ಚಿದ್ದಾರೆ.

ಲಾರಿ ಚಾಲಕ ಬೆಂಗಳೂರು ನೆಲಮಂಗಲ ನಿವಾಸಿ ಸುನಿಲ್ ಎಂಬಾತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಲಾರಿಯಲ್ಲಿದ್ದ 50 ಕೆ.ಜಿ.ಯಂತೆ ತೂಕದ 300 ಪ್ಲಾಸ್ಟಿಕ್ ಗೋಣಿ ಚೀಲ ಅಕ್ಕಿ ಹಾಗೂ ಸಾಗಾಟಕ್ಕೆ ಬಳಸಿದ್ದ ಲಾರಿಯನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.ಇದರ ಒಟ್ಟು ಮೌಲ್ಯ 7 ಲಕ್ಷ ರೂ.ಎಂದು ಅಂದಾಜಿಸಲಾಗಿದೆ.
ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಫರಂಗಿಪೇಟೆಯಲ್ಲಿನ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದಾಗ ಅನುಮಾನಾಸ್ಪದವಾಗಿ ಬಂದ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ ಲಾರಿಯಲ್ಲಿ ತುಂಬಿಸಲಾಗಿದ್ದ ಅಕ್ಕಿ ಲೋಡ್ ಗೆ ಯಾವುದೇ ದಾಖಲೆಗಳಿರಲಿಲ್ಲ ಎನ್ನಲಾಗಿದೆ.ತಕ್ಷಣ ಪೊಲೀಸರು ಲಾರಿ ಸಹಿತ ಅಕ್ಕಿಯನ್ನು ವಶಪಡಿಸಿ ಪ್ರಕರಣ ದಾಖಲಿಸಿದ್ದಾರೆ.