ಪಿಲಿಂಗಾಲು: ಶ್ರೀ ಗಾಯತ್ರಿದೇವಿ ದೇವಸ್ಥಾನ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ ಧಾರ್ಮಿಕತೆಯಿಂದ ಅಂತಃಕರಣ ಶುದ್ಧಿ ಸಾಧ್ಯ: ದೇವು ಮೂಲ್ಯಣ್ಣ
ಬಂಟ್ವಾಳ:ಅಂತಃಕರಣ ಶುದ್ಧಿಯ ಮೂಲಕ ದೈವ ಮತ್ತು ದೇವಾಲಯ ಜೀರ್ಣೋದ್ಧಾರ, ಬ್ರಹ್ಮಕಲಶ ಮತ್ತಿತರ ಧಾರ್ಮಿಕತೆಯಿಂದ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಉಳ್ಳಾಲ ಉಳಿಯ ಧರ್ಮರಸು ಉಳ್ಳಾಲ್ತಿ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಅವರು ಹೇಳಿದರು.
ಸುಮಾರು ರೂ ೧ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಇಲ್ಲಿನ ವಗ್ಗ ರಾಷ್ಟೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿದೇವಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಅವರ ಆಧ್ಯಾತ್ಮಿಕ ಸಾಧನೆಯಿಂದ ಕ್ಷೇತ್ರದಲ್ಲಿ ಗಾಯತ್ರಿ ದೇವಿ, ಮಹಾಗಣಪತಿ ಮತ್ತು ಗುರು ರಾಘವೇಂದ್ರ ಸ್ವಾಮಿ ನೆಲೆಸಿದ್ದಾರೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮ ಸುಭಿಕ್ಷಗೊಳ್ಳುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮಾತನಾಡಿ, ಊರಿನ ಪ್ರಗತಿಗೆ ಪೂರಕವಾಗಿರುವ ದೇವಸ್ಥಾನಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಯೋಜನಾಧಿಕಾರಿ ಪಿ.ಜಯಾನಂದ, ಅಖಿಲ ಕರ್ನಾಟಕ ಗಾಣಿಗರ ಸಂಘದ ರಾಜ್ಯಾಧ್ಯಕ್ಷ ರಾಜಶೇಖರ ಗಾಣಿಗ ಬೆಂಗಳೂರು, ಮುಂಬೈ ಉದ್ಯಮಿ ನಿತ್ಯಾನಂದ ಪೂಜಾರಿ ಕೆಂತಲೆ, ಬಂಟ್ವಾಳ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ, ಕಾರಿಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಕಾವಳಪಡೂರು ಗ್ರಾ.ಪಂ.ಅಧ್ಯಕ್ಷೆ ರಜನಿ ಬಾಬು ಕುಲಾಲ್, ಸಫಲ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಸಂಜೀವ ಅಡ್ಯಾರ್, ಎಡಪದವು ಗಾಣಿಗರ ಸಂಘದ ಅಧ್ಯಕ್ಷ ಭಾಸ್ಕರ ಎಡಪದವು, ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘು ಸಪಲ್ಯ ಪಾಣೆಮಂಗಳೂರು, ಉಪಾಧ್ಯಕ್ಷರಾದ ಕೆ.ಬಾಬು ಸಪಲ್ಯ ವಗ್ಗ, ಎಂ. ಬೂಬ ಸಪಲ್ಯ ಮುಂಡಬೈಲು, ಉಮೇಶ ಬೋಳಂತೂರು, ಅರ್ಚಕ ಪ್ರಕಾಶ ಉಡುಪ, ಶ್ರೀಪತಿ ಉಡುಪ ಕೆಳಮಂಗಲ ಮತ್ತಿತರರು ಇದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಕಲ್ಲಡ್ಕ, ಪ್ರಾಸ್ತಾವಿಕ ಮಾತನಾಡಿಸದರು. ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು.
ಮನ್ಮಥ್ ಶೆಟ್ಟಿ ಮತ್ತು ಚೇತನ್ ಪಿಲಿಂಗಾಲು ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ಮತ್ತು ಶ್ರೀ ಗುರು ರಾಘವೇಂದ್ರ ಸ್ವಾಮಿ ಬಿಂಬ ಪ್ರತಿಷ್ಠೆ, ಪರಿವಾರ ದೈವಗಳ ಪ್ರತಿಷ್ಠೆ, ವಿವಿಧ ತಂಡಗಳಿಂದ ಭಜನೆ ಸೇವೆ ನೆರವೇರಿತು.