ಕೈಕಂಬ: ಕುಪ್ಪೆಪದವಿನಲ್ಲಿ ಅಪ್ಪೆ' ತಾಯಿ(ದುರ್ಗೆ) ನೆಲೆಸಿರುವುದು ಎಷ್ಟು ಸತ್ಯವೋ, ದೇವಾಲಯ ನವೀಕರಣದ ಮೂಲಕ ಆಕೆಗೆ ಸಲ್ಲಿಕೆಯಾಗುತ್ತಿರುವ ಸೇವೆಯೂ ಅಷ್ಟೇ ಅನನ್ಯವಾಗಿದೆ. ಬದಲಾದ ಕಾಲಘಟ್ಟದಲ್ಲಿಭಕ್ತಿ ಸಂಸ್ಕೃತಿ’ ಬದಲಿಸದೆ, ಅದರಲ್ಲಿ ವಿಶಿಷ್ಟತೆ ಕಾಯ್ದುಕೊಳ್ಳಬೇಕು. ಇದು ನಮ್ಮಿಂದ ಮಾತ್ರ ಸಾಧ್ಯ. `ಶ್ರೀ ದುರ್ಗೆಯ” ಇಚ್ಛೆಯೂ ಇದೇ ಆಗಿದೆ “ತಾಯಿ” ಎಲ್ಲರಿಗೂ ಸನ್ಮಂಗಳ ಉಂಟುಮಾಡಲಿ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಜಿ ಹೇಳಿದರು.

ಅವರು ಕುಪ್ಪೆಪದವು ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನದಲ್ಲಿ ಫೆ. ೧೨ರಂದು ನಡೆಯಲಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಫೆ. ೭ರಂದು ಬೆಳಿಗ್ಗೆ `ಉಗ್ರಾಣ ಮುಹೂರ್ತ’ ಕಾರ್ಯಕ್ರಮ ಮೂಲಕ ಚಾಲನೆ ನೀಡಿದ ಬಳಿಕ ಆಯೋಜಿಸಲಾದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಶ್ರೀ ಹರಿನಾರಾಯಣ ದಾಸ ಆಸ್ರಣ್ಣರು ದೀಪ ಪ್ರಜ್ವಲಿಸಿದರು. ಬಳಿಕ ಮಾತನಾಡಿ ಪ್ರಕೃತಿ ಆರಾಧನೆಯಲ್ಲಿ ವಿಜ್ಞಾನ ಸುಪ್ತವಾಗಿದೆ. ಪ್ರಕೃತಿಯೇ ವಿಜ್ಞಾನಕ್ಕೆ ಮೂಲ. ವಿಜ್ಞಾನ ಯುಗದಲ್ಲಿ ಅಧ್ಯಯನದ ಮೂಲಕ ನಾವು ಕಂಡುಹಿಡಿದಿರುವ ಎಲ್ಲ ವಿಷಯಗಳ ಪ್ರಸ್ತಾವವು ಪುರಾಣ ಗ್ರಂಥಗಳಲ್ಲಿ ಅಡಕವಾಗಿವೆ. ಆದ್ದರಿಂದ ವಿಜ್ಞಾನವು ಪ್ರಕೃತಿ, ಧಾರ್ಮಿಕ ನೆಲೆಗಟ್ಟಿನಿಂದ ಹೊರತಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಬಹುತೇಕ ಮೂರು ಗ್ರಾಮ ಹಾಗೂ ಸುತ್ತಲ ಪ್ರದೇಶದ ಜನರ ಸಹಕಾರದಿಂದ ಸುಮಾರು ೨ ಕೋಟಿ ರೂ ವೆಚ್ಚದಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದ್ದು, ಇದರ ಹಿಂದಿರುವ ಜನರ ಶ್ರಮ ಇತರರಿಗೆ ಮಾದರಿಯಂತಿದೆ ಎಂದರು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಧಾರ್ಮಿಕ ಉಪನ್ಯಾಸ ನೀಡಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಜ್ಜುಗೊಂಡಿರುವ ಇಲ್ಲಿ ಸ್ವರ್ಗದ ವಾತಾವರಣ ಸೃಷ್ಟಿಯಾಗಿದೆ. ಧರ್ಮ ಮತ್ತು ಸಂಸ್ಕೃತಿ ಕ್ಷೀಣಿಸಿದಾಗ ನಮಗೆ ನಾವು ದೂರವಾಗುತ್ತೇವೆ. ಇದಕ್ಕೆ ಇಂದಿನ `ಪೆಟ್ಟಿಗೆ’ ಸಂಸ್ಕೃತಿ ಸ್ಪಷ್ಟ ನಿದರ್ಶನ. ಒಗ್ಗೂಡುವಿಕೆ ಇಲ್ಲ. ಈ ನಿಟ್ಟಿನಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಕಂಡು ಬರುವ ಸಾಂಸ್ಕೃತಿಕ ವಾತಾವರಣ ಹೆಚ್ಚು ಅರ್ಥಪೂರ್ಣವಾಗಿದೆ ಎಂದರು.
ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ನೀಲಯ ಎಂ. ಅಗರಿ ಮತ್ತು ತಾಪಂ. ಮಾಜಿ ಸದಸ್ಯ ಕೆ. ಆರ್. ಪೃಥ್ವೀರಾಜ್ ಎಡಪದವು ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ರಾಮಚಂದ್ರ ಸಾಲ್ಯಾನ್ ತಾಳಿಪಾಡಿ ಸ್ವಾಗತಿಸಿ, ಪ್ರಸ್ತಾವಿಸಿದರು.
ಮುತ್ತೂರು ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ಕುಪ್ಪೆಪದವು ಪಂಚಾಯತ್ ಸದಸ್ಯರಾದ ಮಂಜುಳಾ ಕಾಪಿಕಾಡು, ವಿಜಯಾ ಕಲ್ಲಾಡಿ, ನಿತೇಶ್ ಕುಮಾರ್ ದೊಡ್ಡಳಿಕೆ, ವಿನೋದಾ, ಮುತ್ತೂರು ಪಂಚಾಯತ್ ಸದಸ್ಯೆ ಪುಷ್ಪಾ ನಾಯ್ಕ್, ಜಿಪಂ ಮಾಜಿ ಸದಸ್ಯ ಕೃಷ್ಣ ಅಮೀನ್ ಗಂಜಿಮಠ, ಎಡಪದವು ವ್ಯ.ಸೇ.ಸ.ಸಂ. ನಿಯಮಿತ ಅಧ್ಯಕ್ಷ ನೀಲಯ ಎಂ. ಅಗರಿ, ದ.ಕ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಗಿರೀಶ್ ಆಳ್ವ, ಗಂಜಿಮಠ ವ್ಯ.ಸೇ.ಸ.ಸಂ. ನಿಯಮಿತ ಅಧ್ಯಕ್ಷ ಜಯಾನಂದ ನಾಯಕ್ ಮೊಗರು, ಪ್ರವೀಣ್ ಕುಮಾರ್ ಜೈನ್ ಅಗರಿ(ದೇವಸ್ಥಾನದ ಆಡಳಿತ ಮೊಕ್ತೇಸರ), ಅಜಿತ್ ಕುಮಾರ್ ಜೈನ್(ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ), ಜಗದೀಶ ಕುಲಾಲ್ ಪಾಕಜೆ(ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ), ಭಾಸ್ಕರ ಭಟ್, ಶಿವರಾಮ ಕಾರಂತ, ಸೋಮಶೇಖರ ಕೊತ್ತಲಾಯಿ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಪುರುಷೋತ್ತಮ ಕೆ., ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ವಿನೋದ್ ಕುಮಾರ್ ಅಂಬೆಲೊಟ್ಟು ಮತ್ತು ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಹಾಗೂ ದೇವಸ್ಥಾನ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು, ನೂರಾರು ಭಕ್ತರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಬಲ ಸಾಲ್ಯಾನ್ ಕೊಂದರಪ್ಪು ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
