Published On: Sat, Jan 28th, 2023

ಶಾಸಕ ರಾಜೇಶ್ ನಾಯ್ಕ್ ರಿಂದ ನವ ಬಂಟ್ವಾಳದ ನಿರ್ಮಾಣ : ಅಣ್ಣಾಮಲೈ‌

ಬಂಟ್ವಾಳ: ಉತ್ತಮ ಯೋಚನೆಗಿಂತ ಕೆಟ್ಟ ಯೋಚನೆಗಳೇ ರಾಜಕೀಯದಲ್ಲಿ ಹೆಚ್ಚು. ಬಂಟ್ವಾಳ ಒಂದು ವಿಚಿತ್ರ ಕ್ಷೇತ್ರ. ನವ ಬಂಟ್ವಾಳದ ನಿರ್ಮಾಣ ರಾಜೇಶ್ ನಾಯ್ಕ್ ರಿಂದಾಗಿದೆ‌. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದಾಗ ಸಾಮರಸ್ಯ ನೆಲೆಯೂರಲು ಸಾಧ್ಯ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷರಾದ  ಅಣ್ಣಾಮಲೈರವರು ಹೇಳಿದರು‌.

ಬಂಟ್ವಾಳದ ಬಸ್ತಿಪಡ್ಪು ಮೈದಾನದಲ್ಲಿಶುಕ್ರವಾರ ಸಂಜೆ ಶಾಸಕ ರಾಜೇಶ್ ನಾಯ್ಕ್ ಅವರ ” ಗ್ರಾಮ ವಿಕಾಸ ಯಾತ್ರೆಗ್ರಾಮದೆಡೆಗೆ ಶಾಸಕರ ನಡಿಗೆ” ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಅವರುಪ್ರಧಾನ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದರು. ಕೃಷಿಕರನ್ನು ಮೇಲೆಕ್ಕೆತ್ತುವ ಕಾರ್ಯ ಕೇಂದ್ರ, ರಾಜ್ಯ ಸರಕಾರದಿಂದ ಆಗುತ್ತಿದೆ. 
ಪಕ್ಷ, ನಾಯಕರ ಮೇಲೆ ನಂಬಿಕೆ ಅಗತ್ಯವಿದೆ ಎಂದ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ  ಬಂಟ್ವಾಳದಲ್ಲಿ ಬಿಜೆಪಿಯ ಗೆಲುವು ನಿಶ್ಚಿತ. ಆದರೆ ಮತವನ್ನು ಇಮ್ಮುಡಿಗೊಳಿಸುವುದಕ್ಕಾಗಿ ಗ್ರಾಮ ವಿಕಾಸ ಯಾತ್ರೆ ಅಗತ್ಯವಿದೆ ಎಂದರು.
ಕಾಂಗ್ರೆಸ್ ನಿಂದ ಸುಳ್ಳಿನ ಕಂತೆ:
ಮಾತನಾಡುವುದಕ್ಕಿಂತ ಅದನ್ನು ಮಾಡಿತೋರಿಸುವ ತಾಕತ್ತು ನಮ್ಮಲ್ಲಿರಬೇಕು.ಕೆಲಸ ಮಾಡಿ ಹೇಳುವ ಪದ್ದತಿ ಬಿಜೆಪಿಯದ್ದಾಗಿದೆ ಎಂದ ಅಣ್ಣಾಮಲೈ ಕಾಂಗ್ರೆಸ್ ನಿಂದ ಸುಳ್ಳಿನ ಕಂತೆಯನ್ನು ಹೇಳುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸವಾಗುತ್ತಿದೆ.
ಎರಡುಸಾವಿರ ರೂಪಾಯಿ ಯಾವುದೇ ಕಾರಣಕ್ಕೂ ಜನರಿಗೆ ಕೊಡಲು ಸಾಧ್ಯವಿಲ್ಲ.  ಯುವಜನತೆ ಎಚ್ಚೆತ್ತುಕೊಂಡು ಕೆಲಸಮಾಡಬೇಕಿದೆ ಎಂದರು.
ನಾವು ಒಟ್ಟು ಸೇರಿ  ಅಭಿವೃದ್ಧಿಯ ಕಡೆ ನಡೆಯಬೇಕು. ಪ್ರಧಾನಿ ನರೇಂದ್ರ ಮೋದೀಜಿಯವರ ನಿರಂತರ ಪ್ರಯತ್ನದ ಫಲವಾಗಿ ನಾವಿಂದು ಕೊರೋನದಿಂದ  ಮುಕ್ತರಾಗಿದ್ದೇವೆ.
ರಾಜಕೀಯ ಶಿಕ್ಷಣ ಎಲ್ಲರಿಗೂ ಬೇಕಾಗಿದೆ.
ಪಾರ್ಟಿ ಇನ್ನಷ್ಟು ಆಳವಾಗಿ ಕೆಲಸ ಮಾಡಲು ಎಲ್ಲರ ಸಹಕಾರ ಅಗತ್ಯವಿದೆ. ಕಾಂಗ್ರೆಸ್ ಗೆ ಕರ್ನಾಟಕದ ಮೇಲೆ ಕಣ್ಣಿದ್ದು,  ಕಾಂಗ್ರೆಸ್ ಕಲ್ಪನೆ ವಿಚಿತ್ರವಾಗಿದ್ದು, ಕಾಂಗ್ರೆಸ್ ಬಗ್ಗೆ ನಮಗೆ ಭಯಬೇಡ, ಇಲ್ಲಿನ  ಜನರಿಗೆ ವಿಕಾಸ ಬೇಕು.  ಬ್ರಿಟಿಷ್ ಆಳ್ವಿಕೆಯ ತರಹದ ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು  ಅಣ್ಣಾಮಲೈರವರು ಹೇಳಿದರು‌.


ನಕಲಿ ಹಿಂದುಗಳು :  ಸಿ.ಟಿ.ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ  ಕಾರ್ಯದರ್ಶಿ ಸಿ.ಟಿ.ರವಿರವರು ಮಾತನಾಡಿ,ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ  ಪ್ರಜೆಗಳ ಧ್ವನಿ ಕೇಳುವುದಕ್ಕಾಗಿ ಆಗಿರಲಿಲ್ಲ.ಬದಲಾಗಿ ಈ ಯಾತ್ರೆ ಬಿಜೆಪಿಗರನ್ನು ಹಾಗೂ ಪ್ರಧಾನಿ ಮೋದಿ ಬೈಯ್ಯುವ ಯಾತ್ರೆಯಾಗಿತ್ತು ಎಂದರು.
ಕರಾವಳಿಗರ ನೆಮ್ಮದಿಗೆ ಕಾಂಗ್ರೆಸ್ ಕೊಳ್ಳಿ ಇಟ್ಟಿದ್ದು,  ನೈಜ ಹಿಂದೂಗಳು ದೈವ ವಿರೋಧಿಗಳು, ಕುಂಕುಮ ಅಳಿಸೋರಾ ಎಂದು  ಪ್ರಶ್ನಿಸಿದ ಅವರು,
ನಕಲಿ ಹಿಂದೂಗಳಿಗೆ ಕೇಸರಿ ಕಂಡರೆ ಆಗಲ್ಲ. ನೈಜ ಹಿಂದುಗಳು ದೈವದೇವರನ್ನು ನಿಂದಿಸಲ್ಲ. ರಾಮ‌ಮಂದಿರಕ್ಕೆ ವಿರೋಧ ಮಾಡಿದವರು ನಕಲಿ ಹಿಂದುಗಳು, ಮೊನ್ಮೆ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿದ್ದವರು ನಕಲಿ ಹಿಂದುಗಳು ಎಂದರು.
ಹೇಳದೆ ಕೆಲಸ ಮಾಡುವ ಪಕ್ಷ ಇದ್ದರೆ ಅದು ಬಿಜೆಪಿ. ದೇವಸ್ಥಾನದ ಹುಂಡಿಗೆ ಕನ್ನ ಹಾಕುವ ಪ್ರಯತ್ನ ಸಿದ್ದರಾಮಯ್ಯರವರ ಸರಕಾರದಿಂದ ಆಗಿದೆ. ಜಾತಿ ತಾರತಮ್ಯ ತೊರೆದು ಯೋಜನೆಯನ್ನು ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸ ಮೋದೀಜಿ ನೇತೃತ್ವದ ಸರಕಾರದಿಂದ ಆಗಿದೆ. ಜಾತಿ ಕೇಳಿ ಯೋಜನೆಯನ್ನು ನೀಡಿರುವುದು ಕಾಂಗ್ರೆಸ್ ಸರಕಾರ.
ಜಾತಿಗಿಂತ ನೀತಿ ಮುಖ್ಯ ಎಂದರು.  ದುಡ್ಡು ಕೊಟ್ಟು ವಿದ್ಯುತ್ ಕೇಳಿದ ರೈತನನ್ನು ಜೈಲಿಗಟ್ಟಿದವರು ಈಗ 200 ವ್ಯಾಟ್ ಉಚಿತ ವಿದ್ಯುತ್ ಕೋಡುವುದಾಗಿ ಹೇಳುವುದು ಹಾಸ್ಯಾಸ್ಪದವಾಗಿದೆ  ಎಂದು ಲೇವಡಿ ಮಾಡಿದ ಅವರು,ಪ್ರಧಾನಿ ಮೋದಿಯವರು ಉಚಿತವಾಗಿ ನೀಡಿದ ಕೊರೋನ ಲಸಿಕೆ ಪಡೆದರಿಂದಲೇ  ಸಿದ್ದರಾಮಯ್ಯ ಅವರಿಗೆ ಮಾತನಾಡಲು ಸಾಧ್ಯವಾಗಿದೆ ಎಂದರು.
ವಿವಾದ ರಹಿತ ಶಾಸಕ:
ಶಾಸಕ ರಾಜೇಶ್ ನಾಯ್ಕ್ ಅವರುವಿವಾದವಿಲ್ಲದ ರಾಜಕಾರಣಿ,ತನ್ನ ಕ್ಷೇತ್ರದ ಅಭಿವೃದ್ಧಿ ಚಿಂತನೆಯ ಶಾಸಕರಾಗಿದ್ದು, ಅವರನ್ನು ಇನ್ಮೊಮ್ಮೆ ಗೆಲ್ಲಿಸುವ ಪ್ರಯತ್ನ ನಿಮ್ಮದಾಗಬೇಕು. ನಕಲಿ ಹಿಂದುಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದರು.

ತುಂಬಾ ಖುಶಿ ತಂದಿದೆ.: ನಾಯ್ಕ್ 
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್  ಉಳಿಪ್ಪಾಡಿಗುತ್ತುರವರು ಮಾತನಾಡಿ ಗ್ರಾಮ ವಿಕಾಸ ಯಾತ್ರೆಯಿಂದ ನನಗೆ ತುಂಬಾ ಖುಶಿ ತಂದಿದೆ. ಗ್ರಾಮದ ಜನರೊಂದಿಗೆ ಬೆರೆಯಲು ಸಿಕ್ಕಿದ ಅವಕಾಶವಾಗಿದೆ.   ನನಗೆ ಪಕ್ಷ ಮುಖ್ಯ ವ್ಯಕ್ತಿ ಮುಖ್ಯವಲ್ಲ. ಪಕ್ಷ ಗಟ್ಟಿಯಾದಂತೆ ಮತಗಟ್ಟಿಯಾಗುತ್ತದೆ. ಈ ಭಾಗದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಸಹಕಾರ ನೀಡುವ ಕಾರ್ಯಕರ್ತರಿರುವಾಗ  ವಿಜಯದ ಬಗ್ಗೆ ಚಿಂತೆಯಿಲ್ಲ ಎಂದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಪ್ರದೇಶ. ಈ ಕ್ಷೇತ್ರದಲ್ಲಿ ಇನ್ನಷ್ಟು ಕೆಲಸ ಕಾರ್ಯಗಳನ್ನು ಮಾಡಲು ಬಾಕಿ ಇದೆ. ಕೋಮು ಗಲಭೆಗೆ ಅಂತ್ಯ ಹಾಡಿದ ನೆಮ್ಮದಿ ನನಗಿದೆ. ಜನತೆ ನನಗೆ ನೀಡಿರುವ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ ಎಂದರು.
ವಿಕಾಸಯಾತ್ರೆ ಯಶಸ್ವಿ: ಸುದರ್ಶನ್ 
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು ಮಾತನಾಡಿ ಗ್ರಾಮ ಗ್ರಾಮ ವಿಕಾಸ ಯಾತ್ರೆ ಬಂಟ್ವಾಳದಲ್ಲಿ ಯಶಸ್ವಿಯಾಗಿದೆ. ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಪಾದಾಯತ್ರೆ ಇತರರಿಗೆ ಮಾದರಿಯಾಗಿದೆ. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಈ ವಿಕಾಸ ಯಾತ್ರೆಯಿಂದ ಆಗಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಜನರಿಗೆ ರಾಜೇಶ್ ನಾಯ್ಕ್ ರವರ ಅವಧಿಯಲ್ಲಿ ಸಾಮರಸ್ಯದ ಬದುಕು ಸಿಕ್ಕಿದೆ ಎಂದರು.
   ಸಜ್ಜನಿಕೆಯ ರಾಜಕೀಯ ಮಾಡಿದ ಕೀರ್ತಿ ರಾಜೇಶ್ ನಾಯ್ಕ್ ರದ್ದಾಗಿದೆ. ಜಗತ್ತು ಭಾರತವನ್ನು ನೋಡುವ ಸ್ಥಿತಿ ನಿರ್ಮಾಣವಾಗಿದೆ. ಹಿರಿಯರು ಕಂಡ ಕನಸು ನನಸು ಮಾಡುವ ಕೆಲಸ ಮೋದೀಜಿಯವರಿಂದಾಗುತ್ತಿದೆ. ದೇಶದ ಆದ್ಯಾತ್ಮಿಕ ಕೇಂದ್ರ, ಸಂಸ್ಕೃತಿಯನ್ನು ಪುನರುತ್ಥಾನ ಮಾಡಿದ ನಾಯಕ ಮೋದೀಜಿ‌. ವಿವಿಧ ಯೋಜನೆಗಳ ಮೂಲಕ ಜನರನ್ನು ಮುಟ್ಟುವ ಕೆಲಸ ರಾಜ್ಯ, ಕೇಂದ್ರ ಸರಕಾರದಿಂದಾಗಿದೆ. ದೇಶದ ಸಂಸ್ಕೃತಿ ಪರಂಪರೆ ಉಳಿಯಲು ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಿದೆ ಎಂದರು.

ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು. 

ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕೆಯುಡಬ್ಲುಎಸ್ ಸದಸ್ಯೆ
ಸುಲೋಚನ‌ ಜಿ.ಕೆ.ಭಟ್, ಸಾಮಾಜಿಕ ಜಾಲತಾಣ,ಮಾಧ್ಯಮ ಪ್ರಕೋಷ್ಠದ ಸಂಚಾಲಕ ವಿಕಾಸ್ ಪುತ್ತೂರು,ದ.ಕ.ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿಗಳಾದ ರಾಮ್ ದಾಸ್ ಬಂಟ್ವಾಳ, ಕಸ್ತೂರಿ ಪಂಜ, ಮಾಧ್ಯಮ ಪ್ರಮುಖ್ ಸಂದೇಶ್ ಶೆಟ್ಟಿ,ವಿಕಾಸಯಾತ್ರೆ ಸಹಸಂಚಾಲಕರಾದ  ಮಾಧವ ಮಾವೆ,ಸುದರ್ಶನ್ ಬಜ,ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ವೇದಿಕೆಯಲ್ಲಿದ್ದರು.
ನುಡಿನಮನ
ಗುರುವಾರ ರಾತ್ರಿ ನಿಧನರಾದ ಬಂಟ್ವಾಳ ತಾಲೂಕು ಬಿಲ್ಲವ ಸಮಾಜಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಅವರಿಗೆ ಕಿಯೋನಿಕ್ಸ್  ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ನುಡಿನಮನ ಸಲ್ಲಿಸಿದರು.ಒಂದು ನಿಮಿಷದ ಮೌನಪ್ರಾರ್ಥನೆಯ ಮೂಲಕ ಶೃದ್ದಾಂಜಲಿಯನ್ನು ಅರ್ಪಿಸಲಾಯಿತು.
ಯಾತ್ರೆಯ ಸಂಚಾಲಕ ದೇವದಾಸ್ ಶೆಟ್ಟಿ ಪ್ರಾಸ್ತಾವಿಸಿ  ಬಂಟ್ವಾಳ ಕ್ಷೇತ್ರಕ್ಕೆ ಶಾಸಕ ರಾಜೇಶ್ ನಾಯ್ಕ್  ತಮ್ಮ ಶಾಸಕತ್ವದ ಅವಧಿಯಲ್ಲಿ ವಿವಿಧ ಯೋಜನೆಯಡಿ ತಂದಿರುವ ಅನುದಾನ, ಮಾಡಿರುವ ಸಾಧನೆಯನ್ನು ವಿವರಿಸಿ,ಸ್ವಾಗತಿಸಿದರು.
ವಿದ್ಯಾಶ್ರೀ ಆಚಾರ್ಯ ಕಲ್ಲಡ್ಕ ವಂದೇ ಮಾತರಂ ಗೀತೆ ಹಾಡಿದರು. ಬಿಜೆಪಿ ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ವಂದಿಸಿದರು. ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ  ದಿನೇಶ್ ಸುವರ್ಣ ರಾಯಿ ಕಾರ್ಯ ಕ್ರಮ ನಿರ್ವಹಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter