ಬಿ.ಎಸ್.ಯಡಿಯೂರಪ್ಪ ಹಾಗೂ ಕರಾವಳಿಗೆ ಅವಿಭಾವ ಸಂಬಂಧವಿದ್ದು, ಅದರ ಪರಿಣಾಮವಾಗಿಯೇ ಬಂಟ್ವಾಳಕ್ಕೆ ಸಾವಿರ ಕೋ.ರೂ.ಗಳಿಗೆ ಮಿಕ್ಕಿದ ಅನುದಾನ:ಬಿ.ವೈ.ವಿಜಯೇಂದ್ರ
ಬಂಟ್ವಾಳ: ಅಧಿಕಾರದಿಂದ ಹೊರ ಬಿದ್ದಿರುವ ಕಾಂಗ್ರೆಸ್ ಪಕ್ಷದ ಸ್ಥಿತಿ ನೀರಿನಿಂದ ತೆಗೆದ ಮೀನಿನಂತಾಗಿದ್ದು, ರಾಜ್ಯದ ಪ್ರಜೆಗಳಿಂದ ಧಿಕ್ಕರಿಸಲ್ಪಟ್ಟು ಇದೀಗ ಪ್ರಜಾ ಧ್ವನಿ ಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಅವರು ಬಂಟ್ವಾಳ ಬಿಜೆಪಿಯ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ ೧೦ನೇ ದಿನದ ಪಾದಯಾತ್ರೆಯ ಬಳಿಕ ಕೊಯಿಲದಲ್ಲಿ ಶ್ರೀ ದೇವಪ್ಪ ಶೆಟ್ಟಿ ಮಾವಂತೂರು ವೇದಿಕೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪ್ರಧಾನಿ ಮೋದಿಯವರುಸ್ವಾರ್ಥಕ್ಕಾಗಿ ರಾಜಕಾರಣ ಮಾಡದೆ ಭಾರತವನ್ನು ಜಗತ್ತಿನ ಯಾವುದೇ ದೇಶದ ಮುಂದೆ ತಲೆ ಭಾಗದ ರೀತಿಯಲ್ಲಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಹಾಗೂ ಕರಾವಳಿಗೆ ಅವಿಭಾವ ಸಂಬಂಧವಿದ್ದು, ಅದರಪರಿಣಾಮವಾಗಿಯೇ ಬಂಟ್ವಾಳಕ್ಕೆ ಸಾವಿರ ಕೋ.ರೂ.ಗಳಿಗೆ ಮಿಕ್ಕಿದ ಅನುದಾನ ನೀಡಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಅನಿರೀಕ್ಷಿತವಾಗಿ ಚುನಾವಣೆಗೆ ಬಂದು ಪರಾಭವಗೊಂಡರೂ ಎಲ್ಲಾ ಜಾತಿ, ಧರ್ಮದ ಜನರ ವಿಶ್ವಾಸ ಗಳಿಸಿದ ಪರಿಣಾಮ ಗೆದ್ದು ಬಂದಿದ್ದಾರೆ. ಪ್ರಸ್ತುತ ಬಂಟ್ವಾಳದಲ್ಲಿ ಅವರ ಸಾಧನೆಯೇ ಮಾತನಾಡುತ್ತಿದೆ.
ದೇಶದಲ್ಲಿ ರಕ್ಷಣಾ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಸ್ವಾವಲಂಬಿತನ ಸಾಧಿಸಬೇಕು ಎಂದು ಪ್ರಧಾನಿ ಹಗಲಿರುಳು ಶ್ರಮಿಸುತ್ತಿದ್ದು, ಅವರು ಅಧಿಕಾರಕ್ಕೇರಿದ ಸಂದರ್ಭದಲ್ಲಿ ಕೇವಲ ೭೦ ಸಾವಿರ ಕಿ.ಮೀ. ಇದ್ದ ಹೆದ್ದಾರಿಯನ್ನು ೨ ಲಕ್ಷ ಕಿ.ಮೀ.ಏರಿಸಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ೧.೬೫ ಲಕ್ಷ ಕಿ.ಮೀ.ಹೆದ್ದಾರಿ ಅಭಿವೃದ್ಧಿಗೊಂಡಿದೆ.
ಮನೆ ಮನೆಗೆ ಗಂಗೆ ಯೋಜನೆಯಲ್ಲಿ ೩೫.೫೦ ಲಕ್ಷ ಮನೆಗಳಿಗೆ ನಳ್ಳಿಗಳನ್ನು ಅಳವಡಿಕೆ ಮಾಡಲಾಗಿದ್ದು, ಪಿಎಂ ಕಿಸಾನ್ ಸಮ್ಮಾನ್ ೫೦ ಲಕ್ಷ ಕುಟುಂಬಗಳಿಗೆ ತಲುಪಿದೆ.
ರಾಹುಲ್ ಗಾಂಧಿ ಅವರು ಕಾಲಿಟ್ಟ ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ನಾಮ ಆಗಿದ್ದು, ಅವರ ಭಾರತ್ ಜೋಡೊ ಕಾಂಗ್ರೆಸ್ ಅಧಪತನಕ್ಕೆ ತಳ್ಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ೨೫-೨೬ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲ್ಲಬೇಕಾದರೆ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿರುವುದು ಅನಿವಾರ್ಯವಾಗಿದೆ ಎಂದರು.
ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಂಟಾರು ರವೀಶ ತಂತ್ರಿ ಮಾತನಾಡಿ, ಕಾಸರಗೋಡಿನಲ್ಲೂ ಬಿಜೆಪಿ ಪಾದಯಾತ್ರೆ ನಡೆಯುತ್ತಿದ್ದು, ಸಿಪಿಎಂನ ನಾಟಕದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಕೇರಳದಲ್ಲಿ ರಾಜ್ಯಪಾಲರೇ ರಾಜ್ಯವನ್ನು ಮುನ್ನಡೆಸಲು ಸಂಕಷ್ಟ ಪಡುತ್ತಿದ್ದು, ಬಿಜೆಪಿ ಕೂಡ ಅದೇ ಸ್ಥಿತಿ ಸರಕಾರಕ್ಕೆ ದಿಟ್ಟ ಉತ್ತರ ನೀಡುತ್ತಿದೆ. ಕೇರಳ ಸರಕಾರ ಕೇಂದ್ರ ಸರಕಾರದ ಎಲ್ಲವನ್ನೂ ಪಡೆದು ತನ್ನದೆಂದು ಬಿಂಬಿಸಿ ಆಳ್ವಿಕೆ ನಡೆಸುತ್ತಿದೆ. ಬಿಜೆಪಿಯ ಸಂಸ್ಕಾರವೇ ವಿಶೇಷವಾಗಿದ್ದು, ಬಂಟ್ವಾಳಕ್ಕೆ ಒಬ್ಬನೇ ಸರದಾರನಾಗಿದ್ದು, ಅದು ರಾಜೇಶ್ ನಾಯ್ಕ್ ಮಾತ್ರ ಎಂಬುದನ್ನು ಜನರೇ ತೀರ್ಮಾನ ಮಾಡಿದ್ದಾರೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದರೂ, ಏನು ಆಶಯವಿತ್ತೋ ಅದನ್ನು ಈಡೇರಿಸಿದ ತೃಪ್ತಿ ಇದೆ. ಪ್ರಾರಂಭದಲ್ಲಿ ಸೋತಾಗಲೂ ೬೫ ಸಾವಿರಮಂದಿ ತನಗೆ ಮತ ಹಾಕಿದ್ದು, ಮುಂದಿನ ಸಾರಿ ಬಂಟ್ವಾಳದಲ್ಲಿ ಬಿಜೆಪಿ ಗೆಲ್ಲಬೇಕು ಎಂದು ಪಣತ್ತೊಟ್ಟು ಕೆಲಸ ಮಾಡಿದ ಪರಿಣಾಮ ಬಿಜೆಪಿ ಗೆದ್ದಿದೆ. ಅಭಿವೃದ್ಧಿ ನಿರಂತರವಾಗಿದ್ದು, ಶಾಂತಿಯ ಬಂಟ್ವಾಳ ನಿರ್ಮಾಣ ಮಾಡಿದ ತೃಪ್ತಿ ಇದೆ ಎಂದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ನಗರ ನೀರು ಸರಬರಾಜು- ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜೆ.ಕೆ.ಭಟ್, ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಸಂದೇಶ್ ಶೆಟ್ಟಿ, ಪಾದಯಾತ್ರೆಯ ಸಹಸಂಚಾಲಕ ಮಾಧವ ಮಾವೆ, ಸುದರ್ಶನ್ ಬಜ, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ, ರಾಯಿ ಗ್ರಾ.ಪಂ.ಅಧ್ಯಕ್ಷೆ ರತ್ನಾ ಆನಂದ್ ಉಪಸ್ಥಿತರಿದ್ದರು.
ಪಾದಯಾತ್ರೆಯ ಸಂಚಾಲಕ ಬಿ.ದೇವದಾಸ್ ಶೆಟ್ಟಿ ಅವರು ಕ್ಷೇತ್ರದಲ್ಲಿ ರಾಜೇಶ್ ನಾಯ್ಕ್ ನಡೆಸಿದ ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದರು. ಕ್ಷೇತ್ರ ಕಾರ್ಯದರ್ಶಿ ರಮನಾಥ ರಾಯಿ ಸ್ವಾಗತಿಸಿದರು. ರಾಯಿ ಗ್ರಾ.ಪಂ.ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.