ಕೈಕಂಬ :ಮಂಗಳೂರು ತಾಲೂಕಿನ ಗುರುಪುರ ಗೋಳಿದಡಿಗುತ್ತುವಿನ ಮನೆಯಲ್ಲಿ ಗಡಿಪಟ್ಟ ಸ್ವೀಕಾರ ಮಾಡಿದ ದಿನದಿಂದ, ಸತತ ೧೨ ವರ್ಷಗಳಿಂದ ಧರ್ಮ ಕಾರ್ಯ, ನ್ಯಾಯ ತೀರ್ಮಾನ ಮಾಡುತ್ತಾ ಬಂದಿರುವ ನಾನು, ಜ. ೧೭-೧೯ರವರೆಗೆ ಗುತ್ತಿನ ಮನೆಯಲ್ಲಿ ಗುತ್ತಿನ ವರ್ಷದ ಪರ್ಬ'ದ ಜೊತೆಗೆ ೧೨ ವರ್ಷಕ್ಕೊಮ್ಮೆ ಗುತ್ತಿನವರು ಆಚರಿಸಬೇಕಾದಪಾದ ನಡಾವಳಿ’, ಪುನರ್‌ಸಂಧಾನ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದೇನೆ ಎಂದು ಗುರುಪುರ ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಹೇಳಿದರು.

ಗೋಳಿದಡಿ ಗುತ್ತಿನ ಮನೆಯಲ್ಲಿ ಜ. ೧೭, ೧೮ ಮತ್ತು ೧೯ರಂದು ನಡೆಯಲಿರುವ `ಗುತ್ತುದ ವರ್ಷದ ಪರ್ಬೊ’ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಗುತ್ತಿನ ಮನೆಯಲ್ಲಿ ಜ.೧೨ರಂದು ಗುರುವಾರ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಗಡಿಕಾರರು ತಮ್ಮ ಗಡಿ ವ್ಯಾಪ್ತಿಯಲ್ಲಿ ವ್ಯವಹರಿಸುತ್ತ, ದೇಶದ ಸಂವಿಧಾನಕ್ಕೆ ಚ್ಯುತಿ ಬರದಂತೆ ನ್ಯಾಯ ಪರಿಪಾಲನೆ ಮಾಡಬೇಕು ಮತ್ತು ಸತ್ಕರ್ಮ ನಡೆಸಬೇಕು. ಸಣ್ಣ ಪುಟ್ಟ ತಕರಾರುಗಳ ನ್ಯಾಯಕ್ಕಾಗಿ ಗ್ರಾಮದಲ್ಲೇ ಇರುವ ಗುತ್ತಿನ ವ್ಯವಸ್ಥೆಯಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದರು.

ಪರ್ಬೋತ್ಸವ :
ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಬ್ರಹ್ಮಋಷಿ ಕೆ. ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನದಂತೆ ಮೂರು ದಿನಗಳ ಕಾರ್ಯಕ್ರಮ ನಡೆಯಲಿದೆ. ಜ. ೧೭ರಂದು ಶುದ್ಧ ಪುಣ್ಯಾಹ, ಮಂಗಳಸ್ನಾನ, ಮೃತ್ಯುಂಜಯ ಹೋಮ ಮೊದಲಾದ ದೇವತಾ ಕಾರ್ಯ, ಬೆಳಿಗ್ಗೆ ೯ರಿಂದ ಮೂರು ದಿನ ವಿವಿಧ ರೀತಿಯ ಸರಕು ಮಳಿಗೆಗಳ ಪ್ರದರ್ಶನ ಮತ್ತು ಮಾರಾಟ, ಮೂರೂ ದಿನ ಸಂಜೆ ೬ರಿಂದ ೮ರವರೆಗೆ ಗ್ರಾಮೀಣ ಭಾಗದ ಪುರುಷರು ಮತ್ತು ಮಹಿಳೆಯರಿಗೆ ಶಕ್ತಿ ಕಲ್ಲು ಎತ್ತುವ ಸ್ಪರ್ಧೆ(ಸ್ಪರ್ಧೆಗೆ ಶುಲ್ಕವಿಲ್ಲ), ಮಧ್ಯಾಹ್ನ ೨ರಿಂದ ೪ರವರೆಗೆ ದೇವರಾಯ ಕಿಣಿ ಬಳಗದವರಿಂದ ದಾಸವಾಣಿ, ಸಂಜೆ ೬ಕ್ಕೆ ಶ್ರೀ ವೈದ್ಯನಾಥೇಶ್ವರ ವೇದಿಕೆಯಲ್ಲಿ ಗುತ್ತಿನ ವರ್ಷದ ಒಡ್ಡೋಲಗ ಸಭಾ ಕಾರ್ಯಕ್ರಮ ಹಾಗೂ ಸಂಜೆ ೮ಕ್ಕೆ ಮೂಲ್ಕಿ ನವವೈಭವ ತುಳುನಾಡ ವೈಭವ ಕಲಾವಿದರಿಂದ `ತುಳುನಾಡ ತುಡರ್’ ಪ್ರದರ್ಶನಗೊಳ್ಳಲಿದೆ.

ಕೆ. ಎಸ್. ನಿತ್ಯಾನಂದ ಗುರುಗಳ ಸಾನಿಧ್ಯದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ(ತಿಂಗಳೆಬೀಡು), ಡಾ. ವೀಣಾ ಬನ್ನಂಜೆ(ಆಧ್ಯಾತ್ಮಿಕ ಚಿಂತಕಿ), ಕೋನಾರ್ಕ್ ರೈ(ಉದ್ಯಮಿ) ಕೆ. ಭಾಗ್ಯರಾಜ ಆಳ್ವ ಕಾರಮೊಗರುಗುತ್ತು ಹಾಗೂ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ಜ. ೧೮ರಂದು ದೀಕ್ಷಾಧಾರಣೆ, ಪ್ರತಿಷ್ಠಾ ಹೋಮ, ನವಕ ಕಲಶಾಭಿಷೇಕ, ಮಧ್ಯಾಹ್ನ ೧:೩೦ರಿಂದ ೪ ಗಂಟೆಯವರೆಗೆ ಗೋಳಿದಡಿ ಗುತ್ತಿನ ಚಾವಡಿ ಮಿತ್ರರಿಂದ ಭಜನಾ ಸತ್ಸಂಗ, ಸಂಜೆ ೬:೩೦ರಿಂದ ಉಡುಪಿಯ ಬಾರ್ಕೂರು ಹೇರಾಡಿ ಗ್ರಾಮದ ಹುಭಾಶಿಕ ಕೊರಗರ ಯುವಕಲಾ ವೇದಿಕೆ(ರಿ) ಅವರಿಂದ `ಕೊರಗರ ಸಾಂಸ್ಕೃತಿಕ ವೈಭವ’, ೭ಕ್ಕೆ ಶುಭಮಣಿ ಚಂದ್ರಶೇಖರ್ ಅವರಿಂದ ಭರತನಾಟ್ಯ, ಮಂಗಳೂರು ಸನಾತನ ನಾಟ್ಯಾಲಯದವರಿಂದ ಸನಾತನ ನೃತ್ಯಾಂಜಲಿ ಜರುಗಲಿದೆ.
ಜ. ೧೯ರಂದು ಬೆಳಿಗ್ಗೆ ವರುಣ ಹೋಮ ಪೂರ್ವಕ ಅವಭೃತೋತ್ಸವ, ಮಧ್ಯಾಹ್ನ ೧:೩೦ರಿಂದ ೪ರವರೆಗೆ ಮೂಡುಶೆಡ್ಡೆಯ ಶ್ರೀ ದೇವಿ ಭಜನಾ ಮಂಡಳಿಯವರಿಂದ ಭಜನಾ ಸತ್ಸಂಗ, ಸಂಜೆ ೬ರಿಂದ ಪಾವಂಜೆಯ ಶ್ರೀ ಜ್ಞಾನಶಕ್ತಿ ಯಕ್ಷಗಾನ ಮಂಡಳಿಯವರಿಂದ `ನಾಗ ಸಂಜೀವನ’ ಕಾಲಮಿತಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
