| ಬಂಟ್ವಾಳ: ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಹೆಸರು ನೋಂದಾಯಿಸಲು ಜನವರಿ 31 ತನಕ ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದ್ದು,ಸಹಕಾರ ಸಂಘದ ಸದಸ್ಯರು,ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ಪ್ರಕಟಣೆಯಲ್ಲಿತಿಳಿಸಿದ್ದಾರೆ. ಯೋಜನೆ ಸೌಲಭ್ಯ ಹೆಚ್ಚಿನ ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಮತ್ತು ನಿರೀಕ್ಷಿತ ಪ್ರಮಾಣ ಗುರಿ ತಲುಪದಿರುವುದರಿಂದ ದಿನಾಂಕ ವಿಸ್ತರಣೆ ಗೆ ಸಹಕಾರ ಸಂಘಗಳು ಸರಕಾರಕ್ಕೆ ಮನವಿ ಮಾಡಿದ್ದವು.ಸರಕಾರ ಈ ಮನವಿಗಳಿಗೆ ಸ್ಪಂದಿಸುವ ಮೂಲಕ ದಿನಾಂಕ ವಿಸ್ತರಿಸಿ ಆದೇಶ ಹೊರಡಿಸಿರುವುದು ಸಹಕಾರ ಸಂಘದ ಸದಸ್ಯರಿಗೆ ತುಂಬಾ ಅನುಕೂಲಕರವಾಗಿದೆ ಈ ಬಗ್ಗೆ ಸಹಕಾರ ಸಂಘಗಳ ಪರವಾಗಿ ಸರಕಾರಕ್ಕೆ ಅಭಿನಂದಿಸುವುದಾಗಿ ತಿಳಿಸಿದ್ದಾರೆ. ಈ ಯೋಜನೆಯಲ್ಲಿ ಇನ್ನು ನೋಂದಣಿ ಮಾಡದ ಸದಸ್ಯರು ತಕ್ಷಣವೇ ತಮ್ಮ ಹತ್ತಿರದ ಸಹಕಾರ ಸಂಘದ ಕಚೇರಿ ಸಂಪರ್ಕಿಸಿ ತಮ್ಮ ಎರಡು ಭಾವಚಿತ್ರ, ಆದಾರ್ ಕಾರ್ಡ್, ರೇಷನ್ ಕಾರ್ಡ್ ಪ್ರತಿಗಳನ್ನು ಸಲ್ಲಿಸಿ ಯೋಜನೆ ಪ್ರಯೋಜನ ಪಡೆಯುವಂತೆ ಅವರು ವಿನಂತಿಸಿದ್ದಾರೆ. ಪ. ಜಾತಿ., ಪ.ಪಂಗಡದವರಿಗೆ ಪ್ರಿಮೀಯಂ ಹಣ ಸರಕಾರವೇ ಭರಿಸಲಿದ್ದು ಫಲಾನುಭವಿಗಳು ಹಣ ಪಾವತಿಗೆ ಇರುವುದಿಲ್ಲ. ಈ ಯೋಜನೆಗೆ ಸರಕಾರವು 300 ಕೋಟಿ ಅನುದಾನವನ್ನು ಆಯವ್ಯಯದಲ್ಲಿ ಮೀಸಲಿಟ್ಟು ಗ್ರಾಮೀಣ ಮತ್ತು ನಗರ ಪ್ರದೇಶದ ಸುಮಾರು 30 ಲಕ್ಷದಷ್ಟು ಫಲಾನುಭವಿಗಳನ್ನು ನೋಂದಾಯಿಸಲು ಸರಕಾರ ಉದ್ದೇಶಿಸಿದೆ. ಪ್ರತಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ವೆಚ್ಚದ ಗರಿಷ್ಠ ಮಿತಿ 5 ಲಕ್ಷ ಹೊಂದಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಹಕಾರ ಸಂಘಗಳು ಗ್ರಾಮೀಣ ಸ್ವಸಹಾಯ ಗುಂಪಿನಲ್ಲಿ ಕುಟುಂಬದ ಒರ್ವ ವ್ಯಕ್ತಿ ಸದಸ್ಯನಾಗಿ 3 ತಿಂಗಳು ಆದಲ್ಲಿ ಆ ಕುಟುಂಬ ಯಶಸ್ವಿನಿ ಯೋಜನೆ ಸೌಲಭ್ಯ ಪಡೆಯಲು ಅರ್ಹತೆ ಹೊಂದಿರುತ್ತಾರೆ. ಗ್ರಾಮೀಣ ಸಹಕಾರಿಗಳಿಗೆ ಅನ್ವಯಿಸಿದಂತೆ 4 ಸದಸ್ಯರು ಇರುವ ಒಂದು ಕುಟುಂಬಕ್ಕೆ ವಾರ್ಷಿಕ ಕಂತು 500 ಎಂಬುದಾಗಿ ನಿಗದಿ ಪಡಿಸಲಾಗಿದ್ದು 4 ಕಿಂತ ಹೆಚ್ಚಿನ ಸದಸ್ಯರ ಕುಟುಂಬ ಪ್ರತಿ ಯೊಬ್ಬ ಸದಸ್ಯರಿಗೆ 100 ರೂ ರಂತೆ ಹೆಚ್ಚುವರಿಯಾಗಿ ಸದಸ್ಯರು ಪಾವತಿಸಬೇಕು ಎಂದು ಪ್ರಭಾಕರ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |
