ಸಿದ್ಧಕಟ್ಟೆ: ಸಹಕಾರಿ ವ್ಯವಸಾಯಿಕ ಸಂಘ
೩೧ ರಂದು ‘ವೀರ ಸಾವರ್ಕರ್ ವಾಣಿಜ್ಯ ಕಟ್ಟಡ’
ರೈತ ಸಭಾಂಗಣ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ
ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ‘ವೀರ ಸಾವರ್ಕರ್ ವಾಣಿಜ್ಯ ಕಟ್ಟಡ’ ಸಹಿತ ನೇತಾಜಿ ಬಹೂಪಯೋಗಿ ಸೇವಾ ಕೇಂದ್ರ ಮತ್ತು ಬೆಳ್ಳಿಪಾಡಿ ಕೃಷ್ಣ ರೈ ರೈತ ಸಭಾಂಗಣ ಲೋಕಾರ್ಪಣೆ ಜೊತೆಗೆ ಅಮೃತ ಮಹೋತ್ಸವ ಮತ್ತು ನವೀಕೃತ ಕಚೇರಿ ಉದ್ಘಾಟನೆ ಕಾರ್ಯಕ್ರಮ ಇದೇ ೩೧ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದ್ದಾರೆ.
ಸಿದ್ಧಕಟ್ಟೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಸಂಸದ ನಳಿನ್ ಕುಮಾರ್ ಕಟೀಲು, ಡಾ.ಕೆ.ಪ್ರಭಾಕರ ಭಟ್, ಎಂ.ಎನ್. ರಾಜೇಂದ್ರ ಕುಮಾರ್, ಸಹಕಾರ ಭಾರತಿ ರಾಜ್ಯಾಧ್ಯಕ್ಷ ರಾಜಶೇಖರ ಶೀಲವಂತ, ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಕೆಎಂಎಫ್ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ, ಪ್ರಧಾನ ಅರ್ಚಕ ಪ್ರಕಾಶ ಆಚಾರ್ಯ ಮತ್ತಿತರ ಗಣ್ಯರು ಭಾಗವಹಿಸುವರು. ಇದೇ ವೇಳೆ ಸಂಘದ ಮಾಜಿ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿ ಸಹಿತ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಸತೀಶ ಪೂಜಾರಿ ಅಳಕೆ, ಸಂದೇಶ ಶೆಟ್ಟಿ ಪೊಡುಂಬ, ರಾಜೇಶ ಶೆಟ್ಟಿ ಕೊನೆರೊಟ್ಟು, ಹರೀಶ ಆಚಾರ್ಯ ರಾಯಿ, ದಿನೇಶ ಹುಲಿಮೇರು, ಉಮೇಶ ಗೌಡ ಮಂಚಕಲ್ಲು, ಜಾರಪ್ಪ ನಾಯ್ಕ್, ವೀರಪ್ಪ ಪರವ, ದೇವರಾಜ ಸಾಲ್ಯಾನ್, ಮಾಧವ ಶೆಟ್ಟಿಗಾರ್, ಸಿಇಒ ಆರತಿ ಶೆಟ್ಟಿ ಇದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ:
ಸಂಘದ ಉಪಾಧ್ಯಕ್ಷ ಸತೀಶ ಪೂಜಾರಿ ಅಳಕೆ ಮಾತನಾಡಿ, ಕಳೆದ ಎರಡೂವರೆ ವರ್ಷಗಳ ಬಳಿಕ ನನ್ನನ್ನು ಅಧ್ಯಕ್ಷ ಮಾಡುವುದಾಗಿ ಭರವಸೆ ನೀಡಿದ್ದ ಬಂಟ್ವಾಳ ಬಿಜೆಪಿ ಮುಖಂಡರು ಮಾತಿಗೆ ತಪ್ಪಿದ್ದಾರೆ. ಇದರಿಂದಾಗಿ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ಕೇವಲ ನಿರ್ದೇಶಕನಾಗಿ ಮುಂದುವರಿಯಲು ನಿರ್ಧರಿಸಿದ್ದೇನೆ ಎಂದು ಅವರು ಪ್ರತಿಕ್ರಿಯಿಸಿದರು.