ಕಾವೂರು ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಹೃದಯಾಘಾತಕ್ಕೆ ಬಲಿ
ಮಂಗಳೂರು: ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂಲತಃ ಬಾಗಲಕೋಟೆಯ ಲವಲೇಶ್ವರ ಗ್ರಾಮದ ಹನುಮಂತ ನಾಯ್ಕ (38) ಅವರು ಹೃದಯಾಘಾತದಿಂದ ವಿಧಿವಶರಾದರು.
ಹನುಮಂತ ನಾಯ್ಕರವರು ತಮ್ಮ ಊರು ಬಾಗಲಕೋಟೆಗೆ ಹೋಗಿದ್ದ ವೇಳೆ ಇಂದು ಮುಂಜಾನೆ ಅವರು ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಿಸದೇ ಅವರು ವಿಧಿವಶರಾಗಿದ್ದಾರೆ.
2008ರ ಬ್ಯಾಚ್‌ನಲ್ಲಿ ಅವರು ಪೊಲೀಸ್ ಇಲಾಖೆಗೆ ಕರ್ತವ್ಯಕ್ಕೆ ಸೇರ್ಪಡೆಗೊಂಡಿದ್ದು, ಈ ಹಿಂದೆ ಮುಲ್ಕಿ ಸಂಚಾರ ಉತ್ತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ತಮ್ಮ ಸರಳ ವ್ಯಕ್ತಿತ್ವ, ಸಮಾಜಮುಖಿ ಕೆಲಸ, ದಕ್ಷ ಕೆಲಸ ಕಾರ್ಯಗಳಿಂದ ಅವರು ಪೊಲೀಸ್ ಇಲಾಖೆಯಲ್ಲಿ ಅಲ್ಪ ಕಾಲದಲ್ಲಿ ಉತ್ತಮ ಹೆಸರು ಗಳಿಸಿದ್ದರು. ಮೂಲತಃ ಅವರು ಬಾಗಲ ಕೋಟೆ ಜಿಲ್ಲೆಯವರಾದರೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಪೊಲೀಸ್ ಎನ್ನುವ ಹೆಸರು ಗಳಿಸಿದ್ದರು. ಮೃತರು ಪತ್ನಿ ಮಂಜುಳಾ, ಮಕ್ಕಳಾದ ಕೃತ್ತಿಕಾ, ಲಾವಣ್ಯ, ಕೃಪಾ ಮತ್ತು ಕುಶಾಲ್ ಅವರನ್ನು ಅಗಲಿದ್ದಾರೆ.