ಅಲ್ಲಿಪಾದೆಯಲ್ಲಿ ಅಕ್ರಮ ಏಸುವಿನ ಪ್ರತಿಮೆ ಸ್ಥಾಪನೆ: ತೆರವಿಗೆ ಹಿ.ಜಾ.ವೇ.ವಾರದ ಗಡುವು
ಬಂಟ್ವಾಳ: ತಾಲೂಕಿನ ಅಲ್ಲಿಪಾದೆ ಇಗರ್ಜಿಯ ಆಡಳಿತ ಸಮಿತಿ ಸರಕಾರಿ ಮತ್ತು ಡಿ.ಸಿ.ಮನ್ನಾ ಜಾಗವನ್ನು ಅತಿಕ್ರಮಿಸಿ ರಾತೋರಾತ್ರಿ ಅಕ್ರಮವಾಗಿ ಏಸುವಿನ ಪ್ರತಿಮೆ ನಿರ್ಮಿಸಿರುವುದನ್ನು ಖಂಡಿಸಿರುವ ಹಿ.ಜಾ.ವೇ. ವಾರದೊಳಗೆ ಈ ಪ್ರತಿಮೆಯನ್ನು ತೆರವುಗೊಳಿಸಬೇಕು ಇಲ್ಲದಿದ್ದಲ್ಲಿ ಸ್ಥಳದಲ್ಲಾಗುವ ಎಲ್ಲಾ ಅಹಿತಕರ ಘಟನೆಗೆ ತಾಲೂಕಾಡಳಿತ ಮತ್ತು ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಸಿದೆ.
ನ.15ರಂದು ಶುಕ್ರವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಹಿ.ಜಾ.ವೇ.ಯ ಪುತ್ತೂರು ಜಿಲ್ಲಾ ಸಹಸಂಚಾಲಕ ನರಸಿಂಹ ಮಾಣಿ ಅವರು ಮಾತನಾಡಿ ಈ ಬಗ್ಗೆ ಈಗಾಗಲೇ ಸ್ಥಳೀಯ ಗ್ರಾಮ ಪಂಚಾಯತ್, ತಾಲೂಕು ದಂಡಾಧಿಕಾರಿಯವರಿಗೆ ಮನವಿಯನ್ನು ನೀಡಿದ್ದು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರಾದರೂ ಇದುವರೆಗೂ ಯಾವುದೇ ಕ್ರಮ ನಡೆದಿಲ್ಲ ಎಂದರು.
ಅಲ್ಲಿಪಾದೆ ಇಗರ್ಜಿಯ ಮುಂಭಾಗ ಸ.ನಂ.56/2ಎ1ಡಿ ಯಲ್ಲಿ4 ಎಕ್ರೆ ಸರಕಾರಿ ಹಾಗೂ ಸ.ನಂ.206/1ಸಿ2 ರಲ್ಲಿ 1.79 ಎಕ್ರೆ ಡಿ.ಸಿ.ಮನ್ನಾ ಜಾಗವನ್ನು ಅತಿಕ್ರಮಿಸಲಾಗಿದ್ದು, ಸರಕಾರಿ ಜಾಗದಲ್ಲಿ ನ.20 ರಂದು ರಾತೋರಾತ್ರಿ ಅನಧಿಕೃತವಾಗಿ ಏಸುವಿನ ಪ್ರತಿಮೆಯನ್ನು ನಿರ್ಮಿಸಿ,ಸುತ್ತಲು ಅವರಣಗೋಡೆ ನಿರ್ಮಿಸಿದ್ದು, ಈ ಎರಡೂ ಜಮೀನನ್ನು ಒತ್ತುವರಿ ಮಾಡುವ ಹುನ್ನಾರವಾಗಿದೆ ಎಂದು ಆರೋಪಿಸಿದ ಅವರು ಇದನ್ನು ವಾರದೊಳಗೆ ತೆರವುಗೊಳಿಸಿ ಈ ಜಾಗವನ್ನು ಕಂದಾಯ ಇಲಾಖೆ ಸ್ವಾಧೀನಪಡಿಸಿ ಸರಕಾರಿ ಕಟ್ಟಡ ಅಥವಾ ನಿವೇಶನ ರಹಿತರ ಸದುಪಯೋಗಕ್ಕೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಈ ಭಾಗದ ರಸ್ತೆಯುದ್ದಕ್ಕು ವಿವಿಧ ಧಾರ್ಮಿಕ ಕೇಂದ್ರಗಳ ಹಾಗೂ ಸಂಘಟನೆಗೆ ಸಂಬಂಧಿಸಿ ಇರುವ ಕಟ್ಟೆ, ಕಾಣಿಕೆ ಡಬ್ಬಿ ಐದಾರು ವರ್ಷದಿಂದ ರಸ್ತೆಯಲ್ಲಿದ್ದು ಇಂದು,ನಿನ್ನೆ ಸ್ಥಾಪನೆಯಾದುದಲ್ಲ, ಆಗ ಯಾರು ಕೂಡ ಈ ಬಗ್ಗೆ ದೂರು ನೀಡಿಲ್ಲ,ಅಲ್ಲಿಪಾದೆಯಲ್ಲಿ ಏಸುವಿನ ಪ್ರತಿಮೆ ದಿನದ ಹಿಂದೆಯಷ್ಠೇ ಸರಕಾರಿ ಜಮೀನು ಕಬಳಿಸಿ ರಾತೋರಾತ್ರಿ ಅಕ್ರಮವಾಗಿ ಸ್ಥಾಪಿಸಲಾಗಿದೆ.ಹಾಗಾಗಿ ಇದರ ತೆರವಿಗೆ ಸಂಬಂಧಪಟ್ಟವರಿಗೆ ದೂರು ಸಲ್ಲಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿ.ಜಾ.ವೇ.ಬಂಟ್ವಾಳ ತಾಲೂಕು ಅಧ್ಯಕ್ಷ ತಿರುಲೇಶ್ ಬೆಳ್ಳೂರು,ಪ್ರಮುಖರಾದ ರವಿಕೆಂಪುಗುಡ್ಡೆ,ಶರತ್ ಸರಪಾಡಿ, ಕಿರಣ್ ಮೂರ್ಜೆ ಮೊದಲಾದವರಿದ್ದರು.
ಕಥೋಲಿಕ್ ಸಭಾದಿಂದ ಮನವಿ:
ಈ ನಡುವೆ ಕಥೋಲಿಕ್ ಸಭಾ ಮಂಗಳೂರು ಪ್ರದೇಶ ಅಲ್ಲಿಪಾದೆ ಘಟಕದ ಪದಾಧಿಕಾರಿಗಳ ನಿಯೋಗ ಬಂಟ್ವಾಳ ತಹಶೀಲ್ದಾರರನ್ನು ಭೇಟಿಯಾಗಿ ಮನವಿಯೊಂದನ್ನು ಸಲ್ಲಿಸಿದೆ.
ಮಣಿಹಳ್ಳ, ಸರಪಾಡಿ, ಅಜಿಲಮೊಗರು ಮೊದಲಾದೆಡೆ ರಸ್ತೆಯಲ್ಲಿಯೇ ವಿವಿಧ ಧಾರ್ಮಿಕ ಸಂಸ್ಥೆ,ಸಂಘಟನೆಗಳಿಗೆ ಸೇರಿದ ಕಟ್ಟೆ,ಕಾಣಿಕೆಡಬ್ಬಿ ಇದ್ದು,ಕೇವಲ ಒಂದು ಧರ್ಮಕ್ಕೆ ವಿರೋಧವಾಗಿ ಕ್ರಮಕೈಗೊಳ್ಳದೆ ಎಲ್ಲರಿಗೂ ಸಮಾನ ನ್ಯಾಯ ಕೊಟ್ಟು ಶಾಂತಿ ,ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದೆ.