ಕಾಪು ಜನಸಂಕಲ್ಪ ಸಮಾವೇಶಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದ ಮುಖ್ಯಮಂತ್ರಿ: ಸುಳ್ಳು ಅಂದ್ರೆ ಕಾಂಗ್ರೆಸ್ – ಕಾಂಗ್ರೆಸ್ ಅಂದ್ರೆ ಸುಳ್ಳು: ಸಿಎಂ ಬೊಮ್ಮಾಯಿ
ಉಡುಪಿ: ಕಾಂಗ್ರೆ ಸ್ ಪಕ್ಷದಿಂದಲೇ ಭ್ರಷ್ಟಾಚಾರ ಆರಂಭವಾಗಿದೆ. ಐವತ್ತು ವರ್ಷ ಪೂರ್ಣ ಭ್ರಷ್ಟ ಸರ್ಕಾರವೇ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆದಿ ಉಡುಪಿ ಹೆಲಿಪ್ಯಾಡ್ ಗೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಕಾಲದಲ್ಲಿ ದಾಖಲೆ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ನ ಭ್ರಷ್ಟಾಚಾರ ಹಾಕಿಕೊಳ್ಳಲು ಖರ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸುಳ್ಳು ಅಂದ್ರೆ ಕಾಂಗ್ರೆಸ್-ಕಾಂಗ್ರೆಸ್ ಅಂದ್ರೆ ಸುಳ್ಳು ಎಂದು ತಿಳಿಸಿದರು.
ಕರಾವಳಿಯಲ್ಲಿ ಕಾಪುವಿನಿಂದ ಜನ ಸಂಕಲ್ಪ ಯಾತ್ರೆ ಪ್ರಾರಂಭವಾಗಿದೆ. ನಾಳೆಯಿಂದ ಗದಗ, ಬೆಳಗಾಂ, ಹಾವೇರಿಯಲ್ಲಿ ಸಂಕಲ್ಪಯಾತ್ರೆ ಮುಂದುವರಿಯುತ್ತದೆ. ಪ್ರತಿಯೊಂದು ಕ್ಷೇತ್ರಕ್ಕೂ ಭೇಟಿಕೊಟ್ಟು ಪಕ್ಷ ಸಂಘಟನೆ ಮತ್ತು ಜನಸ್ಪಂದನ ಮಾಡುತ್ತೇವೆ. ಎಲ್ಲಾ ಕಡೆಯಿಂದಲೂ ಬಹುತೇಕ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಜ್ಯಾದ್ಯಂತ ಕಾರ್ಯಕರ್ತರಲ್ಲಿ ಉತ್ಸಾಹ ಕಾಣುತ್ತಿದ್ದೇವೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಗೆಲ್ಲುತ್ತದೆ ಎಂದು ಸಿದ್ದರಾಮಯ್ಯ ಅವರು ಹೇಳಿದ ಹೇಳಿಕೆ ಒಂದು ಭ್ರಮೆ. ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ನಾವೇ ಬರುತ್ತೇವೆ ಎಂದು ಹೇಳಿಕೆ ನೀಡಿದ್ದರು. ಆದರೆ, ಜನ ಕಾಂಗ್ರೆಸ್ ಅನ್ನು ತಿರಸ್ಕರಿಸಿದೆ ಎಂದು ಅವರು ತಿಳಿಸಿದರು.
ಮುರುಗಾ ಶ್ರೀಗಳ ಮೇಲೆ ಪೋಕ್ಸ್ ಪ್ರಕರಣ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪ್ರಕರಣ ಈಗಾಗಲೇ ಕೋರ್ಟ್ ನಲ್ಲಿ ಇದೆ. ಕಾನೂನು ಅದರ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದರು.
*ಕರಾವಳಿಯಲ್ಲಿ ಹೆಚ್ಚಿನ ಹೂಡಿಕೆ:* ನವೀಕರಿಸಬಹುದಾದ ಇಂಧನ, ವಿಶೇಷವಾಗಿ ಹೈಡೋಜನ್ ಇಂಧನ, ಅಮೋನಿಯಾ ಕರಾವಳಿ ಪ್ರದೇಶದಲ್ಲಿಯೇ ಹೆಚ್ಚಿದ್ದು, ಮಂಗಳೂರು ಮತ್ತು ಉಡುಪಿ ಪ್ರದೇಶದಲ್ಲಿ ಹೂಡಿಕೆಯ ನಿರೀಕ್ಷೆಯಲ್ಲಿದ್ದೇವೆ ಎಂದರು.
*ಭತ್ತ ಖರೀದಿ ಕೇಂದ್ರ:* ಕರಾವಳಿಯಲ್ಲಿ ಭತ್ತ ಖರೀದಿ
ಕೇಂದ್ರಕ್ಕೆ ಬೇಡಿಕೆಯಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.