ಅಂಬೇಡ್ಕರ್ ಪ್ರತಿಮೆ ಧ್ವಂಸ – ಮಹಿಳೆಯರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್
ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) ಮಹಿಳೆಯರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ನಿಂದಿಸಿ ಕಿರುಚಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪೊಲೀಸರ ವಾಹನದ ಮೇಲೆ ಮಹಿಳೆಯರು ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದ ಬಳಿಕ ಪರಿಸ್ಥಿತಿ ಅತೀರೇಕಕ್ಕೆ ತಲುಪಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ವೈರಲ್ ಆಗುತ್ತಿರುವ ವೀಡಿಯೋ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ (Ambedkar Nagar district) ಜಲಾಲ್‍ಪುರದಾಗಿದ್ದು (Jalalpur), ಇತ್ತೀಚೆಗಷ್ಟೇ ಬಿ.ಆರ್. ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ಪ್ರಕರಣ ಸಂಬಂಧ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಭೂ ವಿವಾದವಿರುವ ಸ್ಥಳದಲ್ಲಿ ಪ್ರತಿಮೆ ಇರುವುದು ಪ್ರತಿಭಟನೆಗೆ ಕಾರಣವಾಗಿದ್ದು, ಭಾನುವಾರ ಮಹಿಳೆಯರ ಗುಂಪು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಅವರನ್ನು ಚದುರಿಸಲು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಕೆಲವು ಪ್ರತಿಭಟನಾಕಾರರು ಹಿರಿಯ ಅಧಿಕಾರಿ ಸೇರಿದಂತೆ ಪೊಲೀಸರ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದ್ದರು.
ನಂತರ ಪ್ರತಿಭಟನಾಕಾರರು ಪೊಲೀಸ್ ಕಾರಿನ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಈ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಲಾಠಿ ಪ್ರಹಾರ ನಡೆಸಬೇಕಾಗಿತ್ತು ಎಂದು ಅಂಬೇಡ್ಕರ್ ನಗರ ಹಿರಿಯ ಪೊಲೀಸ್ ಅಧಿಕಾರಿ ಅಜಿತ್ ಕುಮಾರ್ ಸಿನ್ಹಾ ಹೇಳಿದ್ದಾರೆ.