ಖಾನ್ ಹತ್ಯೆಗೆ ಸಂಚು ಮಾಡಿರುವುದು ಸಾಬೀತಾದರೆ ಒಂದು ನಿಮಿಷವೂ ಪ್ರಧಾನಿಯಾಗಿರಲ್ಲ: ಶೆಹಬಾಜ್ ಷರೀಫ್
ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಹತ್ಯೆ ನಡೆಸಲು ವಿಫಲ ಯತ್ನ ಮಾಡಿರುವ ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ಒಂದು ನಿಮಿಷವೂ ಪ್ರಧಾನಿಯಾಗಿರದೇ ರಾಜೀನಾಮೆ ನೀಡುತ್ತೇನೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಹೇಳಿದ್ದಾರೆ.
ಪ್ರತಿಭಟನಾ ರ‍್ಯಾಲಿಯ ವೇಳೆ ಇಮ್ರಾನ್ ಖಾನ್ ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಇಮ್ರಾನ್ ಖಾನ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ವಿಫಲ ಕೊಲೆ ಸಂಚನ್ನು ಪ್ರಧಾನಿ ಶೆಹಬಾಜ್ ಷರೀಫ್, ಹಿರಿಯ ಸೇನಾಧಿಕಾರಿ ಹಾಗೂ ಆಂತರಿಕ ಸಚಿವರು ನಡೆಸಿರುವುದಾಗಿ ಇಮ್ರಾನ್ ಖಾನ್ ಅನುಮಾನ ಹೊಂದಿದ್ದಾರೆ ಎಂದು ಪಿಟಿಐ ನಾಯಕರು ತಿಳಿಸಿದ್ದರು.
ಇದೀಗ ಈ ಆರೋಪಕ್ಕೆ ತಿರುಗೇಟು ನೀಡಿರುವ ಷರೀಫ್, ಖಾನ್ ಮೇಲಿನ ದಾಳಿಗೆ ಸಂಬಧಿಸಿದಂತೆ ಯಾವುದೇ ಪಿತೂರಿಯಲ್ಲಿ ನಾನು ಭಾಗಿಯಾಗಿರುವುದು ಕಂಡುಬಂದರೆ, ಒಂದು ನಿಮಿಷವೂ ಪ್ರಧಾನಿಯಾಗಿ ಉಳಿಯುವುದಿಲ್ಲ. ತಕ್ಷಣವೇ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಗುರುವಾರ ಪಾಕಿಸ್ತಾನದ ಪಂಜಾಬ್‌ನಲ್ಲಿ ನಡೆದಿದ್ದ ಪ್ರತಿಭಟನಾ ಮೆರವಣಿಗೆ ವೇಳೆ ಬಂದೂಕುಧಾರಿಯೊಬ್ಬ ಇಮ್ರಾನ್ ಖಾನ್ ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದ. ತೆರೆದ ಟ್ರಕ್ ಮೇಲೆ ನಿಂತುಕೊಂಡು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಖಾನ್‌ನ ಕಾಲಿಗೆ ಗುಂಡು ತಗುಲಿ ಗಾಯಗಳಾಗಿತ್ತು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನೆಯಲ್ಲಿ ಪಿಟಿಐ ನಾಯಕರು ಸೇರಿದಂತೆ 15 ಜನರಿಗೆ ಗಾಯಗಳಾಗಿತ್ತು. ಒಬ್ಬ ವ್ಯಕ್ತಿ ಸಾವನ್ನಪ್ಪಿರುವುದಾಗಿಯೂ ವರದಿಯಾಗಿದೆ.
ಘಟನೆಯ ಬಳಿಕ ಪ್ರಧಾನಿ ಶೆಹಬಾಜ್ ಷರೀಫ್, ಆಂತರಿಕ ಸಚಿವ ರಾಣಾ ಸನಾವುಲ್ಲಾ ಹಾಗೂ ಮೇಜರ್ ಜನರಲ್ ಫೈಸಲ್ ನಸೀರ್ ಅವರು ಈ ಹತ್ಯೆಯ ಸಂಚಿನ ಹಿಂದೆ ಇರುವುದಾಗಿ ಇಮ್ರಾನ್ ಖಾನ್ ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಷರೀಫ್ ಈ ಆರೋಪವನ್ನು ತಳ್ಳಿಹಾಕಿ, ಇದು ದೇಶದ ಅಡಿಪಾಯವನ್ನು ಒಡೆದು, ಅಸ್ತಿರತೆ ಉಂಟುಮಾಡಲು ನೀಡಿರುವ ಹೇಳಿಕೆ ಎಂದಿದ್ದಾರೆ.