ತೂಗು ಸೇತುವೆ ದುರಂತ- ಸಾವಿನ ಸಂಖ್ಯೆ 132ಕ್ಕೆ ಏರಿಕೆ; ಸ್ಥಳಕ್ಕೆ ಮೋದಿ ಭೇಟಿ ನೀಡುವ ಸಾಧ್ಯತೆ
ಅಹಮದಾಬಾದ್: ಗುಜರಾತ್‍ನ (Gujarat) ಮೊರ್ಬಿ ಜಿಲ್ಲೆಯಲ್ಲಿ ಸಂಭವಿಸಿದ ತೂಗು ಸೇತುವೆ (Cable Bridge Collapse) ದುರಂತದಲ್ಲಿ 132 ಮಂದಿ ಬಲಿಯಾಗಿದ್ದಾರೆ.

ಮಚ್ಚು ನದಿಗೆ ನಿರ್ಮಿಸಿರುವ ಮೊರ್ಬಿ ತೂಗು ಸೇತುವೆ ನಿನ್ನೆ ಕುಸಿದು ಬಿದ್ದು ದುರಂತ ಸಂಭವಿಸಿದೆ. ನಾಪತ್ತೆಯಾದವರಿಗಾಗಿ, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಎನ್‍ಡಿಆರ್‌ಎಫ್, ವಾಯುಪಡೆ, ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯ ಮುಂದುವರಿದಿದೆ. ದೋಣಿ, ಬೋಟ್‍ಗಳ ಸಹಾಯದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಈಗಾಗಲೇ 177ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದಾರೆ.

140ಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಈ ತೂಗು ಸೇತುವೆ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಕೇಬಲ್‍ಗಳ ಸಹಾಯದಿಂದ ಬ್ರಿಟಿಷರು ನಿರ್ಮಿಸಿರುವ ಅತಿ ಉದ್ದದ ತೂಗು ಸೇತುವೆ ಇದಾಗಿದೆ. ನಿನ್ನೆ ರಜೆ ದಿನದ ಹಿನ್ನೆಲೆ ಈ ಪ್ರದೇಶದಲ್ಲಿ ಜನ ದಟ್ಟನೆ ಇತ್ತು. ನೂರು ಜನರ ಸಾಮರ್ಥ್ಯಯುಳ್ಳ ಸೇತುವೆ ಮೇಲೆ ಐದು ನೂರಕ್ಕೂ ಅಧಿಕ ಮಂದಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೇಬಲ್ ಕಟ್ ಆಗಿ ಧರಗೆ ಉರುಳಿದೆ ಎನ್ನಲಾಗುತ್ತಿದೆ.

ಶಿಥಿಲಗೊಂಡಿದ್ದ ಹಿನ್ನೆಲೆ 2 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿತ್ತು. ನವೀಕರಣಗೊಂಡ ಸೇತುವೆಯನ್ನು ಐದು ದಿನಗಳ ಹಿಂದೆ ಉದ್ಘಾಟಿಸಲಾಗಿತ್ತು. ಮೂರು ದಿನದ ಹಿಂದೆ ಜನರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿತ್ತು. ಈಗ ಏಕಾಏಕಿ ಕುಸಿದಿರುವುದು ಅಕ್ರಮ ಕಾಮಗಾರಿ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ದುರಂತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಸಾಧ್ಯತೆ ಇದೆ. ಈಗಾಗಲೇ ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿರುವ ಅವರು ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಐವತ್ತು ಸಾವಿರ ಪರಿಹಾರ ನೀಡಿದ್ದಾರೆ. ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.