ಉಳ್ಳಾಲ: ಪತ್ನಿಯ ಮೇಲೆ ಅತಿಯಾದ ಸಂಶಯ ಪಡುತ್ತಿದ್ದ ವ್ಯಕ್ತಿಯೋರ್ವ ಪತ್ನಿಯನ್ನ ಕತ್ತು ಹಿಸುಕಿ ಕೊಂದು ತಾನೂ ತೋಟದ ಮರಕ್ಕೆ ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪಿಲಾರು ಪಂಜಂದಾಯನ ದೈವಸ್ಥಾನದ ಬಳಿ ನಡೆದಿದೆ. ಪಿಲಾರು ನಿವಾಸಿಗಳಾದ ಶೋಭಾ ಪೂಜಾರಿ(45)ಕೊಲೆಯಾದ ಮಹಿಳೆ ಮತ್ತು ಆಕೆಯ ಪತಿ ಶಿವಾನಂದ ಪೂಜಾರಿ (55) ಆತ್ಮಹತ್ಯೆಗೈದವರಾಗಿದ್ದಾರೆ.

ಬೆಳಿಗ್ಗೆ ಹತ್ತು ಗಂಟೆ ವೇಳೆಗೆ ಶೋಭಾ ಅವರು ಮನೆ ಹತ್ತಿರದ ಇನ್ನೂರು ಗುತ್ತು ಕುಟುಂಬಸ್ಥರ ಮನೆಯಿಂದ ಗೊಬ್ಬರ ತಂದಿದ್ದರು.ಮದ್ಯಾಹ್ನ 12 ಗಂಟೆ ವೇಳೆಗೆ ಶೋಭಾ ಅವರ ಹಿರಿಯ ಮಗ ಕಾರ್ತಿಕ್ ತಾಯಿಗೆ ಕರೆ ಮಾಡಿದ್ದು ಕರೆ ಸ್ವೀಕರಿಸದ ಹಿನ್ನಲೆಯಲ್ಲಿ ಪಕ್ಕದ ಇನ್ನೂರು ಗುತ್ತು ಮನೆಯವರಿಗೆ ವಿಚಾರಿಸಲು ತಿಳಿಸಿದ್ದಾನೆ.ಪಕ್ಕದ ಮನೆಯ ಶಕುಂತಳ ಶೆಟ್ಟಿ ಅವರು ಶೋಭಾ ಅವರ ಮನೆಯೊಳಗೆ ಪ್ರವೇಶಿಸಿದಾಗ ಶೋಭಾ ಅವರು ಬೆಡ್ ರೂಮಿನ‌ ಮಂಚದಲ್ಲಿ ಹೆಣವಾಗಿದ್ದರು. ಗಾಬರಿಗೊಂಡ ಶಕುಂತಳ ಅವರು ಮನೆಮಂದಿಗೆ ತಿಳಿಸಿದಾಗ ಪಕ್ಕದ ತೋಟದ ಮರಕ್ಕೆ ಶಿವಾನಂದ ಅವರು ನೇಣು ಬಿಗಿದದ್ದು ತಿಳಿದು ಬಂದಿದೆ.

ಶಿವಾನಂದ ಪೂಜಾರಿ ಅವರು ಪೈಂಟರ್ ಕೆಲಸ ಮಾಡುತ್ತಿದ್ದು ಪತ್ನಿ ಅಲ್ಲದೆ ಮಗಳ ಮೇಲೂ ನಿರಂತರವಾಗಿ ಸಂಶಯ ಪಡುತ್ತಿದ್ದನಂತೆ. ನೆರೆಹೊರೆಯವರಲ್ಲೂ ಸೈಕೋ ಶಿವಾನಂದ ವಿನಾ ಕಾರಣ ತಗಾದೆ ಎತ್ತಿ ಗಲಾಟೆ ನಡೆಸುತ್ತಿದ್ದನಂತೆ ಪತ್ನಿ ಶೋಭಾ ಅವರು ಸನ್ನಡತೆಯ ಮಹಿಳೆಯಾದರೂ ಆಕೆಗೆ ಯಾರಾದರೂ ಫೋನ್ ಕರೆ ಮಾಡಿದರೂ ಸೈಕೋ ಪತಿರಾಯ ಗಲಾಟೆ ನಡೆಸುತ್ತಿದ್ದನೆಂದು ನೆರೆಹೊರೆಯ ನಿವಾಸಿಗಳು ತಿಳಿಸಿದ್ದಾರೆ.

ಶೋಭಾ ಅವರ ಕಿರಿಯ ಮಗಳು ಕಾವ್ಯ ಎರಡು ವರುಷ ಹಿಂದಷ್ಟೆ ಮದುವೆಯಾಗಿದ್ದಳು.ಹಿರಿಯ ಮಗ ಕಾರ್ತಿಕ್ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾನೆ.ಸೈಕೋ ತಂದೆ ಮಾಡಿದ ಹೀನ ಕೃತ್ಯಕ್ಕೆ ಮಕ್ಕಳೆ ಬಾಯಿಗೆ ಬಂದ ರೀತಿ ಬೈದು ತಾಯಿ ಮೃತದೇಹದ ಮುಂದೆ ಕಣ್ಣೀರಿಟ್ಟಿದ್ದಾರೆ.

ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ,ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದಾರೆ‌.

By suddi9

Leave a Reply

Your email address will not be published. Required fields are marked *