ಕೇರಳದಲ್ಲಿ ನರಬಲಿ ಪ್ರಕರಣ – ಮಹಿಳೆ ದೇಹವನ್ನು 56 ತುಂಡು ಮಾಡಿ ಭಕ್ಷಿಸಿರುವ ಶಂಕೆ
ತಿರುವನಂತಪುರಂ: ಆದಷ್ಟು ಬೇಗ ಹಣ ಗಳಿಸುವ ಆಸೆಯಿಂದ ಕೇರಳದ (Kerala) ದಂಪತಿ (Couple) ಇಬ್ಬರು ಮಹಿಳೆಯರನ್ನು (Women) ನರಬಲಿ (Human Sacrifice) ನೀಡಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯರ ದೇಹವನ್ನು 56 ತುಂಡುಗಳನ್ನಾಗಿ ಕತ್ತರಿಸಿದ್ದು ಮಾತ್ರವಲ್ಲದೇ ದುರುಳರು ನರಮಾಂಸ ಭಕ್ಷಣೆ (Cannibalism) ಮಾಡಿರುವ ಶಂಕೆಯೂ ಮೂಡಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
ನರಬಲಿಯಾದ ರೋಸ್ಲಿನ್ ಹಾಗೂ ಪದ್ಮಾ ಅವರನ್ನು ಕತ್ತು ಹಿಸುಕಿ ಸಾಯಿಸುವುದಕ್ಕೂ ಮೊದಲು ಅವರಿಗೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಲಾಗಿದೆ. ಮಹಿಳೆಯರ ಸ್ತನಗಳನ್ನು ಕತ್ತರಿಸಿ, ರಕ್ತ ಹರಿಯುವಂತೆ ಮಾಡಲಾಗಿದ್ದು, ಬಳಿಕ ಒಂದು ದೇಹವನ್ನು 56 ತುಂಡುಗಳನ್ನಾಗಿ ಕತ್ತರಿಸಲಾಗಿದೆ. ಮಹಿಳೆಯರ ದೇಹದ ಭಾಗಗಳು ಒಟ್ಟು 3 ಹೊಂಡಗಳಲ್ಲಿ ಪತ್ತೆಯಾಗಿರುವುದಾಗಿ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾಫಿ 2020ರಲ್ಲಿ 75 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದ. ಬಳಿಕ ಆತ ದಂಪತಿ ಭಗವಲ್ ಸಿಂಗ್ ಹಾಗೂ ಲೈಲಾಗೆ ಬೇಗನೆ ಹಣ ಗಳಿಸಲು ನರಬಲಿ ನೀಡುವಂತೆ ಸಲಹೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಶಫಿ ಸಾಮಾಜಿಕ ಮಾಧ್ಯಮಗಳಲ್ಲಿ ರೋಸ್ಲಿನ್ ಹಾಗೂ ಪದ್ಮಾರನ್ನು ಸಂಪರ್ಕಿಸಿ, ಅಶ್ಲೀಲ ಚಿತ್ರದಲ್ಲಿ ನಟಿಸಲು ಹಣದ ಆಮಿಷ ಒಡ್ಡಿದ್ದ ಎಂದು ಶಂಕಿಸಲಾಗಿದೆ. ನರಬಲಿ ವೇಳೆ ಶಫಿ ಪದ್ಮಾಳ ಕತ್ತು ಹಿಸುಕಿ, ಶಿರಚ್ಛೇದ ಮಾಡಿ ಆಕೆಯ ದೇಹವನ್ನು 56 ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಹೇಳಿದ್ದಾರೆ.
ಆರೋಪಿ ಲೈಲಾ ರೋಸೆಲಿನ್‌ಳ ಕತ್ತು ಹಿಸುಕಿ, ಆಕೆಯ ಸ್ತನಗಳನ್ನು ಕತ್ತರಿಸಿದ್ದಾಳೆ. ಆಕೆಗೆ ಚಾಕುವಿನಿಂದ ಚಿತ್ರಹಿಂಸೆ ನೀಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.