Published On: Mon, Oct 10th, 2022

ಕೇರಳ: ಶ್ರೀ ಅನಂತಪುರ ಸರೋವರದ ಕಾವಲುಗಾರರಾಗಿದ್ದ ಮೊಸಳೆ ‘ಬಬಿಯಾ’ ಇನ್ನಿಲ್ಲ.

ಕೇರಳ: ಕಾಸರಗೋಡಿನ ಶ್ರೀ ಅನಂತಪುರ ಸರೋವರದ ದೇವಾಲಯದ ಕಾವಲುಗಾರರಾಗಿದ್ದ ದಿವ್ಯ ಮೊಸಳೆ ‘ಬಬಿಯಾ’ ಇನ್ನಿಲ್ಲ. ಬಬಿಯಾ ಅವರು ಶ್ರೀ ಅನಂತ ಪದ್ಮನಾಭ ಸ್ವಾಮಿಯ ಪ್ರಸಾದವನ್ನು ಸೇವಿಸುವ ಮೂಲಕ ಕಳೆದ 70+ ವರ್ಷಗಳಿಂದ ದೇವಾಲಯದ ಸರೋವರದಲ್ಲಿ ವಾಸಿಸುತ್ತಿದ್ದರು.

ಈ ಕ್ಷೇತ್ರ ಕೆರೆ ನೀರಿನ ಮಧ್ಯೆ ಇದ್ದು ಕೆರೆಯಲ್ಲಿ ವಾಸವಾಗಿದ್ದ ಬಬಿಯಾ “ದೇವರ ಮೊಸಳೆ” ಎಂದೇ ಪ್ರಸಿದ್ಧಿ ಪಡೆದಿತ್ತು. ಹಲವಾರು ವರ್ಷಗಳಿಂದ ದೇವಸ್ಥಾನದ ಕೆರೆಯಲ್ಲಿ ಇರುತ್ತಿದ್ದ ಬಬಿಯಾಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯ. ಕೆಲ ವರ್ಷದ ಹಿಂದೆ ಕೆರೆಯಿಂದ ಹೊರಬಂದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು.

ಈ ದೇವಾಲಯದ ಕೆರೆಯ ನಡುವಿನಲ್ಲಿ ನೆಲೆಸಿರುವ ‘ಅನಂತಪದ್ಮನಾಭನಿಗೆ ಮೊಸಳೆ-ಬಬಿಯಾ ‘ಕಾವಲು ಕಾಯುವ ಕೆಲಸ’ ಮಾಡುತ್ತದೆ ಎನ್ನುವ ನಂಬಿಕೆ ಇತ್ತು. ವರ್ಷದ ಎಲ್ಲಾ ದಿನವೂ ಶುದ್ಧ ನೀರಿನಿಂದ ತುಂಬಿರುವ ಈ ಕೆರೆಯೇ ಮೊಸಳೆಯ ವಾಸಸ್ಥಾನ. ದೇವರ ನೈವೇದ್ಯವೇ ಇದಕ್ಕೆ ನಿತ್ಯ ಆಹಾರ. ಬಬಿಯಾ ಈ ಕೆರೆಯಿಂದ ದೇವಾಲಯದಲ್ಲಿರುವ ದೊಡ್ಡ ಕೆರೆಗೆ ಮನುಷ್ಯರು ನಡೆದಾಡುವ ದಾರಿಯಲ್ಲೇ ಸಾಗುತ್ತಾ ಸ್ವಚ್ಚಂದವಾಗಿ ಜೀವನ ನಡೆಸುತ್ತಿತ್ತು.

ಕ್ಷೇತ್ರದಲ್ಲೊಂದು ನಿರುಪದ್ರವಿ ಮೊಸಳೆ ಇರುವುದರಿಂದಲೇ ಅನಂತಪುರ ಕ್ಷೇತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಮೂಡಿಸಿ ಜನಪ್ರಿಯತೆ ಪಡೆದಿತ್ತು. ಸ್ವಾತಂತ್ರ್ಯ ಪೂರ್ವದಲ್ಲೇ ಕ್ಷೇತ್ರದಲ್ಲಿ ಮೊಸಳೆ ಇತ್ತು. ಅದನ್ನ ಈ ಪ್ರದೇಶದಲ್ಲಿ ಮಿಲಿಟರಿ ಕ್ಯಾಂಪ್ ಹಾಕಿದ್ದ ಬ್ರಿಟೀಷರು ಗುಂಡಿಕ್ಕಿ ಕೊಂದಿದ್ದರಂತೆ. ತದನಂತರ ಮತ್ತೊಂದು ಮೊಸಳೆ ಮರಿ ತಾನಾಗಿಯೇ ಕೆರೆಯಲ್ಲಿ ಪ್ರತ್ಯಕ್ಷಗೊಂಡಿತ್ತು. ಅದಕ್ಕೆ ಬಬಿಯಾ ಎಂದು ಹೆಸರಿಸಲಾಗಿತ್ತು.

ಈ ವರೆಗೆ ಯಾರೊಬ್ಬರಿಗೂ ಉಪಟಳ ಮಾಡದ ದೇವರ ಮೊಸಳೆ ಇತ್ತೀಚಿನ ದಿನದಲ್ಲಿ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿತ್ತು. ಅದಕ್ಕೆ ಚಿಕಿತ್ಸೆಯೂ ನಡೆಯುತಿತ್ತು. ಈತನ್ಮಧ್ಯೆ ನಿನ್ನೆ ರಾತ್ರಿ ಅದು ನೀರಲ್ಲಿ ತೇಲಿತು. ಪರಿಸರದ ಭಕ್ತರು ಸೇರಿ ಮೊಸಳೆಯನ್ನು ನೀರಿನಿಂದ ಮೇಲೆತ್ತಿ ಕ್ಷೇತ್ರ ಮುಂಭಾಗದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ತಂತ್ರಿಗಳ ಆಗಮನದ ಬಳಿಕ ಅದರ ಅಂತ್ಯವಿಧಿ ಕ್ರಿಯೆಗಳು ನಡೆಯಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter