ಗದರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಗ – ಪಶ್ಚಾತ್ತಾಪದಿಂದ ತಂದೆನೂ ನೇಣಿಗೆ ಶರಣು
ಚೆನ್ನೈ: ಸದಾ ಮೊಬೈಲ್‍ನಲ್ಲಿ ಗೇಮ್ ಆಡುತ್ತಿದ್ದಕ್ಕೆ ಗದರಿಸಿದ್ದರಿಂದ ಮಗ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು. ಇದನ್ನು ಕಂಡ ಕೆಲವೇ ನಿಮಿಷಗಳಲ್ಲಿ ಪಶ್ಚಾತ್ತಾಪದಿಂದ ತಂದೆ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಂದ್ರತೂರಿನಲ್ಲಿ (Kundrathur) ನಡೆದಿದೆ.

ಮೃತ ವ್ಯಕ್ತಿಯನ್ನು ಕುಂದ್ರತ್ತೂರಿನ ತಿರುವಳ್ಳುವರ್ ಪ್ರದೇಶದಲ್ಲಿ (Thiruvalluvar Street) ಬಡಗಿಯಾಗಿದ್ದ ಸುಂದರ್(40) ಎಂದು ಗುರುತಿಸಲಾಗಿದೆ. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ತಮ್ಮ ಕಿರಿಯ ಮಗ ನವೀನ್ ಸದಾ ಮೊಬೈಲ್ ಫೋನ್‍ನಲ್ಲಿ ಗೇಮ್ ಆಡುತ್ತಿದ್ದರಿಂದ ಓದುವತ್ತ ಗಮನ ಹರಿಸುವಂತೆ ಗದರಿಸಿದ್ದರು.

ಇದರಿಂದ ಮನನೊಂದ ನವೀನ್ ಮನೆಯಲ್ಲಿ ಒಬ್ಬನೇ ಇದ್ದಾಗ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಂತರ ಮನೆಗೆ ಹಿಂತಿರುಗಿದ ಸುಂದರ್‌ಗೆ ನೆರೆಹೊರೆಯವರು ನವೀನ್ ಮೃತಪಟ್ಟಿರುವ ವಿಚಾರ ತಿಳಿಸಿದ್ದಾರೆ. ತಮ್ಮ ಮಗ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದುಕೊಂಡಿರುವುದನ್ನು ಕಂಡು ಸುಂದರ್ ಆಘಾತಕ್ಕೊಳಗಾದರು. ನಂತರ ಅಡುಗೆ ಮನೆಗೆ ಹೋಗಿ ಸುಂದರ್ ಚಾಕುವಿನಿಂದ ಕತ್ತು ಮತ್ತು ಕೈಗಳನ್ನು ಕೊಯ್ದುಕೊಂಡಿದ್ದಾರೆ. ಕೊನೆಗೆ ಕೊಠಡಿಯೊಂದರ ಬಾಗಿಲಿಗೆ ಬೀಗ ಹಾಕಿಕೊಂಡು ನೇಣಿಗೆ ಶರಣಾಗಿದ್ದಾರೆ.