ಹಳೆಯ ಬಾವಿಯೊಳಗೆ ಉಸಿರುಗಟ್ಟಿ ನಾಲ್ವರ ಸಾವು
– ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ
ಅಮರಾವತಿ: ಹಳೆಯ ಬಾವಿಯೊಳಗೆ(well) ತಂದೆ, ಮಗ ಸೇರಿದಂತೆ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ(Andhra Pradesh) ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ. ಮಚಲಿಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಬಂಟುಮಿಲ್ಲಿ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವರದಿಗಳ ಪ್ರಕಾರ ಸ್ಥಳೀಯ ನಿವಾಸಿ ರಾಮರಾವ್(55) ಅವರು ನೀರಿನ ಹರಿವನ್ನು ಸರಿಪಡಿಸುವ ಸಲುವಾಗಿ ಹೂಳು ತೆಗೆಯಲು ಆಳವಾಗಿದ್ದ ಹಳೆಯ ಬಾವಿಗೆ ಇಳಿದಿದ್ದರು. ಆದರೆ ಈ ವೇಳೆ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬಳಿಕ ಅವರ ಮಗ ಲಕ್ಷ್ಮಣ್(33) ರಾಮರಾವ್ ಅವರನ್ನು ರಕ್ಷಿಸುವ ಸಲುವಾಗಿ ಬಾವಿಗೆ ಹಾರಿದ್ದಾರೆ. ಆದರೆ ಅವರಿಗೂ ಅದೇ ವಿಧಿ ಎದುರಾಗಿ, ಬಾವಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಬಾವಿಗೆ ಇಳಿದಿದ್ದ ತಂದೆ, ಮಗನನ್ನು ರಕ್ಷಿಸಲು ಮುಂದಾದ ಗ್ರಾಮದ ಶ್ರೀನಿವಾಸ್ ಹಾಗೂ ರಂಗ ಬಾವಿಗೆ ಇಳಿದಿದ್ದರು. ಆದರೆ ಬಾವಿ ಪ್ರವೇಶಿಸಿದ ಯಾರೊಬ್ಬರೂ ಬದುಕಲು ಸಾಧ್ಯವಾಗಲಿಲ್ಲ. ಬಾವಿಯಲ್ಲಿ ಉಸಿರುಗಟ್ಟಿ ನಾಲ್ವರು ಸಾವನ್ನಪ್ಪಿದ ಮಾಹಿತಿಯನ್ನು ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಮೃತದೇಹಗಳನ್ನು ಬಾವಿಯಿಂದ ಹೊರ ತೆಗೆದಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಆಂಧ್ರಪ್ರದೇಶದ ವಸತಿ ಸಚಿವ ಜೋಗಿ ರಮೇಶ್, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಘಟನೆಯ ಬಗ್ಗೆ ಬಂಟುಮಿಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.