ಕೊಯಿಲ: ರೂ ೨೫ಲಕ್ಷ ವೆಚ್ಚದಲ್ಲಿ ರಂಗಮಂದಿರ ನಿರ್ಮಾಣ, ಅ.೪ ಮತ್ತು ೫ರಂದು ೨೦ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ
ಬಂಟ್ವಾಳ: ತಾಲ್ಲೂಕಿನ ಕೊಯಿಲ ಹನುಮಾನ್ ನಗರ ಎಂಬಲ್ಲಿ ರೂ ೨೫ಲಕ್ಷ ವೆಚ್ಚದಲ್ಲಿ ನೂತನ ರಂಗ ಮಂದಿರ ನಿರ್ಮಾಣಗೊಳ್ಳುತ್ತಿದೆ.
ಕೊಯಿಲ ಗ್ರಾಮದ ಹನುಮಾನ್ ನಗರ ಎಂಬಲ್ಲಿ ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಮತ್ತು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ೨೦ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ.೪ರಿಂದ ೫ರತನಕ ನೂತನ ರಂಗ ಮಂದಿರದಲ್ಲಿ ನಡೆಯಲಿದೆ.
ಕಳೆದ ೧೯ ವರ್ಷಗಳಿಂದ ಸ್ಥಳೀಯ ಖಾಸಗಿ ಜಮೀನಿನಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮಕ್ಕೆ ಟ್ರಸ್ಟಿನ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು ಇವರು ೨೫ ಸೆಂಟ್ಸ್ ಜಮೀನು ಕೊಡುಗೆ ನೀಡಿದ್ದಾರೆ. ಇದೀಗ ರೂ ೨೫ಲಕ್ಷ ವೆಚ್ಚದಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಾಣಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ದಿವಂಗತ ಎಂ.ದೇವಪ್ಪ ಶೆಟ್ಟಿ ಮಾವಂತೂರು ಇವರ ಹೆಸರಿನಲ್ಲಿ ಕಿರು ಸಭಾಂಗಣ ನಿರ್ಮಾಣಗೊಳ್ಳಲಿದೆ ಎಂದು ಶಾರದೋತ್ಸವ ಸಮಿತಿ ಅಧ್ಯಕ್ಷ ರಂಜನ್ ಕುಮಾರ್ ಶೆಟ್ಟಿ ಅರಳ ತಿಳಿಸಿದ್ದಾರೆ.
ಧಾರ್ಮಿಕ ಸಭೆ:
ಅ.೫ರಂದು ಬೆಳಿಗ್ಗೆ ಗಂಟೆ ೧೧.೩೦ ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಯುವ ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮತ್ತಿತರ ಗಣ್ಯರು ಭಾಗವಹಿಸುವರು. ಇದೇ ವೇಳೆ ಭಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.