ಕೆದ್ದಳಿಕೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 24ರಿಂದ ರಜತ ಸಂಭ್ರಮ, ಗ್ರಂಥಾಲಯ ನಿರ್ಮಾಣಕ್ಕೆ ಸಿದ್ಧತೆ
ಬಂಟ್ವಾಳ :ತಾಲ್ಲೂಕಿನ ಕೆದ್ದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಜತ ಸಂಭ್ರಮ ಪ್ರಯುಕ್ತ ತೆರೆದ ಸಭಾಂಗಣ ನಿಮಾಣಗೊಂಡಿದೆ.

ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇದೇ 24ರಿಂದ 25ರತನಕ ‘ರಜತ ಸಂಭ್ರಮ’ ಕಾರ್ಯಕ್ರಮ ನಡೆಯಲಿದ್ದು, ನೂತನ ಗ್ರಂಥಾಲಯ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಾವಳಕಟ್ಟೆ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇದೇ 24 ರಂದು ಬೆಳಿಗ್ಗೆ ಧ್ವಜಾರೋಹಣ ಬಳಿಕ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ, ಹಳೇ ವಿದ್ಯಾರ್ಥಿಗಳಿಂದ ರಸಮಂಜರಿ, ಸಾಂಸ್ಕೃತಿಕ ವೈಭವ, ನಾಟಕ, ಸಂಜೆ 5ಗಂಟೆಗೆ ‘ದಮಯಂತಿ ಪುನರ್ ಸ್ವಯಂವರ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.
ಇದೇ 25 ರಂದು ಬೆಳಿಗ್ಗೆ ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ರಜತ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ರಜತ ಸಂಭ್ರಮ ಪ್ರಯುಕ್ತ ರೂ 12ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಶಾಸಕ ರಾಜೇಶ ನಾಯ್ಕ್ ಶಿಲಾನ್ಯಾಸ ನೆರವೇರಿಸುವರು.
ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಬಿ.ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮತ್ತಿತರ ಗಣ್ಯರು ಭಾಗವಹಿಸುವರು. ಮಧ್ಯಾಹ್ನ ಗಂಟೆ 1.15ಕ್ಕೆ ‘ಯಕ್ಷಗಾನ ವೈಭವ’ ಕಾರ್ಯಕ್ರಮ ನಡೆಯಲಿದೆ ಎಂದರು.
ಶಿಕ್ಷಕರ ಕೊರತೆ: ಇಲ್ಲಿ ಒಟ್ಟು 112 ಮಂದಿ ವಿದ್ಯಾರ್ಥಿಗಳಿದ್ದು, ಶಾಲಾ ಬಸ್ ಸೌಲಭ್ಯವೂ ಇದೆ. ಆದರೆ ಶಿಕ್ಷಕರ ಕೊರತೆ ಎದುರಿಸುತ್ತಿದೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಬಿ.ಪದ್ಮಶೇಖರ ಜೈನ್, ಅಧ್ಯಕ್ಷ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷ ಅಜಿತ್ ಶೆಟ್ಟಿ, ಕೆ. ರಮೇಶ್ ನಾಯಕ್, ಮುಖ್ಯಶಿಕ್ಷಕ ಕುಮಾರ್ ಸಿ. ಮತ್ತಿತರರು ಇದ್ದರು.