ಸರಪಾಡಿ: ತಹಶೀಲ್ದಾರ್ ಗ್ರಾಮ ವಾಸ್ತವ್ಯ
ಬಂಟ್ವಾಳ: ತಾಲ್ಲೂಕಿನ ಸರಪಾಡಿಯಲ್ಲಿ ಶನಿವಾರ ನಡೆದ ತಹಶೀಲ್ದಾರ್ ಡಾ.ಸ್ಮಿತಾ ರಾಮು ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸ್ಥಳೀಯರು ಅಹವಾಲು ಸಲ್ಲಿಸಿದರು.
ಸರ್ಕಾರದ ಆದೇಶದಂತೆ ಗ್ರಾಮ ಮಟ್ಟಕ್ಕೆ ತೆರಳಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಕಾನೂನಿನ ಚೌಕಟ್ಟಿನೊಳಗೆ ಶೀಘ್ರ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಹಶೀಲ್ದಾರ್ ಡಾ.ಸ್ಮಿತಾ ರಾಮು ಹೇಳಿದ್ದಾರೆ.
ಇಲ್ಲಿನ ಸರಪಾಡಿ ಗ್ರಾಮದ ಮಣಿನಾಲ್ಕೂರು ಸೇವಾ ಸಹಕಾರಿ ಸಂಘದ ಸುಬ್ಬಣ್ಣ ಶೆಟ್ಟಿ ಸಭಾಂಗಣದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಣಿನಾಲ್ಕೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಧಾಕೃಷ್ಣ ಮಯ್ಯ ಶುಭ ಹಾರೈಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಸಿಲ್ವಿಯಾ ಫೆರ್ನಾಂಡಿಸ್, ಕಂದಾಯ ನಿರೀಕ್ಷಕ ಜನಾರ್ದನ, ಉಪ ತಹಶೀಲ್ದಾರ್ ದಿವಾಕರ ಮುಗುಳ್ಯ, ನವೀನ್ ಬೆಂಜನಪದವು, ಆಶಾ ಮೆಹಂದಳೆ, ಪರೀಕ್ಷಿತ್ ಶೆಟ್ಟಿ ಮತ್ತಿತರರು ಇದ್ದರು.