ಬಂಟ್ವಾಳ: ದ.ಕ.ಜಿಲ್ಲೆಯ ಪೋಲೀಸ್ ಸಿಂಬ್ಬಂದಿಗಳಿಗೆ 4 ತಿಂಗಳಿನಿಂದ ಸರಕಾರ ಪಡಿತರ ಸೌಲಭ್ಯವನ್ನು ರದ್ದು ಮಾಡಿದೆ, ಸೌಲಭ್ಯ ವಂಚಿತ ಸಿಬ್ಬಂದಿಗಳು ಅತಂತ್ರ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಭಟನೆಯನ್ನು ಮಾಡಲು ಕೂಡಾ ಸಿಬ್ಬಂದಿಗಳಿಗೆ ಅವಕಾಶವಿಲ್ಲದಿರುವುದರಿಂದ ಮಾಧ್ಯಮ ದವರ ಬಳಿ ತಮ್ಮ ಅಳಲತ್ತುಕೊಂಡಿದಾರೆ.
ಸುಮಾರು ವರುಷಗಳಿಂದ ಪೋಲೀಸ್ ಸಿಬ್ಬಂದಿಗಳಿಗೆ ಸರಕಾರ ಉಚಿತವಾಗಿ ಪಡಿತರ ಸೌಲಭ್ಯವನ್ನು ನೀಡುತ್ತಿತ್ತು. ಸರಕಾರ ನೀಡುತ್ತಿದ್ದ್ ಕೂಪನ್ ಪಡೆದುಕೊಂಡು ರೇಷನ್ ಅಂಗಡಿಗೆ ತೋರಿಸಿದರೆ 15 ಕೆ.ಜಿ.ಅಕ್ಕಿ ಮತ್ತು 3 ಕೆ.ಜಿ.ಗೋಧಿ ನೀಡುತ್ತಿದ್ದರು. ಆದರೆ ಸುಮಾರು 4 ತಿಂಗಳಿನಿಂದ ಜಿಲ್ಲೆಯ ಇಲಾಖಾ ನೌಕರರು ರೇಷನ್ ಅಂಗಡಿಗೆ ಹೋಗಿ ಈ ಬಗ್ಗೆ ಕೇಳಿದರೆ ನಿಮಗೆ ಸೌಲಭ್ಯ ಇಲ್ಲ, ಉಚಿತವಾಗಿ ಕೊಡುವುದನ್ನು ನಿಲ್ಲಿಸಿ ಎನ್ನುವ ಸರಕಾರದ ಆದೇಶವಿದೆ ಎಂದು ತೋರಿಸುತ್ತಾರೆ ಎಂದು ಪೋಲಿಸರು ಮಾಧ್ಯಮದವರ ಬಳಿ ಹೇಳಿದ್ದಾರೆ.
ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಿಲ್ಲ, ಯಾಕೆಂದರೆ ಅವರಿಗೆ ರೇಷನ್ನ ಅವಶ್ಯಕತೆಯಿಲ್ಲ. ಬಡತನ ರೇಖೆಯಲ್ಲಿರುವ ಪೋಲೀಸ್ ಪೇದೆಗಳಿಗೆ ಮಾತ್ರ ಇದರ ತೀರಾ ಅವಶ್ಯಕತೆಯಿರುವಂತಹುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪೋಲೀಸರ ಪರವಾಗಿ ಇಲ್ಲಿನ ಜನಪ್ರತಿನಿಧಿಗಳು ಕೂಡಾ ಮಾತೆತ್ತುವುದಿಲ್ಲ. ಇಲ್ಲಿನ ಪೋಲೀಸರಿಗೆ ಕೊಟ್ಟರೂ ಆಗುತ್ತದೆ ಕೊಡದಿದ್ದರೂ ಆಗುತ್ತದೆ ಎಂದು ಅವರು ಭಾವಿಸಿದ್ದಾರೆ ಎಂದು ದೂರಿದ್ದಾರೆ.
ಕೆಲ ಸಮಯದಿಂದ ಪೋಲೀಸರಿಗೆ ಕ್ಯಾಂಟೀನ್ ನೀಡುತ್ತೇವೆ ಎಂದು ಹೇಳಿಕೋಂಡಿದ್ದರೂ ಕೂಡಾ ಈ ವರಗೆ ದ.ಕ.ಜಿಲ್ಲೆಯಲ್ಲಿ ಮಾತ್ರ ಅದಕ್ಕೆ ಕಾಲ ಕೂಡಿಬಂದಿಲ್ಲ, ಮೀನಮೇಷವೇ ಆಗುತ್ತಿದೆ. ಒಟ್ಟಿನಲ್ಲಿ ಬೇರೆವರೆಯವರ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಪೋಲೀಸರಿಗೆ ಮಾತ್ರ ಅವರ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಳ್ಳುವಂತಿಲ್ಲ ಎಂದು ಹೇಳುತ್ತಾರೆ.
