ಮೂಡುಬಿದಿರೆ: (ವಿದ್ಯಾಗಿರಿ, ವಿಲ್ಫಿ ರೆಬಿಂಬಸ್ ವೇದಿಕೆ ): ವೈವಿಧ್ಯತೆಯಲ್ಲಿ ಏಕತೆ ಇರುವ ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಹೀಗೆ ಮೂರು ಪ್ರಧಾನ ಧರ್ಮೀಯರು ಮಾತನಾಡುವ ಸಾಮರಸ್ಯದ ಏಕೈಕ ಭಾಷೆಯಿದ್ದರೆ ಅದು ಕೊಂಕಣಿ. ಇಂದು ಜಾಗತೀಕರಣದ ಬೆಳವಣಿಗೆಯಿಂದಾಗಿ ಸಹಸ್ರಾರು ಸಂಖ್ಯೆಯಲ್ಲಿದ್ದ ಭಾಷೆಗಳು ಇನ್ನಿಲ್ಲವಾಗಿವೆ. ರಾಷ್ಟ್ರೀಯ ಮಾನ್ಯತೆ ಪಡೆದಿರುವ ಕೊಂಕಣಿ ಭಾಷೆಯನ್ನು ನಾವು ಬಳಸಿ,ಉಳಿಸಿ ಬೆಳೆಸದಿದ್ದರೆ ಅದು ಚರಿತ್ರೆಯಲ್ಲಿ ವಿಲೀನವಾಗುವ ಅಪಾಯವಿದೆ. ಆದರೆ ಸಾಮರಸ್ಯದ ಭಾಷೆಯಾಗಿರುವ
ಕೊಂಕಣಿ ಅಳಿಯಲಾರದು. ಅಳಿಯಬಾರದು ಎಂದು ಮಂಗಳೂರಿನ ಬಿಷಪ್ ಅತೀ ವಂದನೀಯ ಎಲೋಶಿಯಸ್ ಪಾವ್ಲಾ ಡಿ.ಸೋಜಾ ಹೇಳಿದರು. ಅವರು ವಿದ್ಯಾಗಿರಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಗೆ ಪೂರಕವಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಬಿ.ವಿ.ಬಾಳಿಗಾ ದ್ವಾರದ ಟಿ.ಎಂ.ಎ.ಪೈ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಆಳ್ವಾಸ್ ಕೊಂಕಣಿ ಸಿರಿಯನ್ನು ಉದ್ಘಾಟಿಸಿ ಮಾತನಾಡಿದರು.

ಗುಮಟೆ ವಾದನದ ಮೂಲಕ ಕೊಂಕಣಿ ಸಿರಿ ಉದ್ಘಾಟಿಸಿ ಮಾತನಾಡಿದ ಅವರು ಕೊಂಕಣಿ ಭಾಷೆ ಮುಖ್ಯವಾಗಿ ಮನೆ,ಶಿಕ್ಷಣ, ಸಮುದಾಯ ಹೀಗೆ ಎಲ್ಲರಿಂದ ಪೋಷಿಸಲ್ಪಡಬೇಕು. ನುಡಿಸಿರಿಯ ಕನ್ನಡ ಮಾತೆಯ ಮಡಿಲಲ್ಲಿ ಕೊಂಕಣಿ ಮಾತೆಗೂ ಸ್ಥಾನ ಸಿಕ್ಕಿರುವುದು ಒಂದು ಐತಿಹಾಸಿಕ ಬೆಳವಣಿಗೆ ಎಂದು ಶ್ಲಾಘಿಸಿದ ಅವರು ಕೊಂಕಣಿ ಭಾಷಿಗರ ಮನೆ ಮನಗಳಲ್ಲಿ ಅರಳುವಂತಾಗಲಿ ಎಂದು ಹಾರೈಸಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರೋಯ್ ಕ್ಯಾಸ್ತೆಲಿನೋ ಮುಖ್ಯ ಅತಿಥಿಯಾಗಿ ಮಾತನಾಡಿ ಜಾಗತೀಕರಣದ ಹಾವಳಿಯಿಂದಾಗಿ ಕೊಂಕಣಿ ಬರಹಗಾರರಿದ್ದರೂ ಸಾಹಿತ್ಯ ಓದುವವರ ಕೊರತೆ ಇದೆ. ಅಕಾಡೆಮಿ ಈ ನಿಟ್ಟಿನಲ್ಲಿ ಆರಂಭಿಸಿರುವ ಸಂಚಾರಿ ಪುಸ್ತಕ ಮಾರಾಟ ವ್ಯವಸ್ಥೆ ಆಶಾದಾಯಕ ಬೆಳವಣಿಗೆ ದಾಖಲಿಸಿದೆ ಎಂದರು.
‘ಕರ್ನಾಟಕ ವರ್ತಮಾನದ ತಲ್ಲಣಗಳು’ ಎಂಬ ಆಳ್ವಾಸ್ ನುಡಿಸಿರಿಯ ಮುಖ್ಯ ಪರಿಕಲ್ಪನೆಗೆ ಅನುಗುಣವಾಗಿ ಕೊಂಕಣಿ ನಿನ್ನೆ ಇಂದು ಮತ್ತು ನಾಳೆ ಪರಿಕಲ್ಪನೆಯಲ್ಲಿ ನಡೆದ ಕೊಂಕಣಿ ಸಿರಿಯಲ್ಲಿ ಕೊಂಕಣಿ ಕಲೆ ಮತ್ತು ಸಂಸ್ಕೃತಿ ಕುರಿತು ಪ್ರೊ. ಜಯವಂತ ನಾಯಕ್ ಹಾಗೂ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಕುರಿತು ಪ್ರೊ. ವಿನ್ಸೆಂಟ್ ಆಳ್ವ ಪಾಂಬೂರು ಅವರಿಂದ ಉಪನ್ಯಾಸ ನಡೆಯಿತು.
ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜಾ ಮಾತನಾಡಿ ಕೊಂಕಣಿ ನಾಟಕ ಅಕಾಡೆಮಿ ಹಾಗೂ ಮಂಗಳೂರು ವಿವಿಯಲ್ಲಿ ಕೊಂಕಣಿ ಅಧ್ಯಯನ ಪೀಠ ಸ್ಥಾಪನೆಗೆ ರಾಜ್ಯದ ಮುಖ್ಯಮಂತ್ರಿಯವರ ಗಮನ ಸೆಳೆದಿದ್ದು ಮುಂದಿನ ಬಜೆಟ್ನಲ್ಲಿ ಈ ಬಗ್ಗೆ ಘೋಷಿಸುವ ಭರವಸೆ ಸಿಕ್ಕಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಗೋವಾದಿಂದ ವಲಸೆ ಬಂದ ಕೊಂಕಣಿ ಭಾಷಿಗರು ಕರಾವಳಿಯಲ್ಲಿ ನೆಲೆಸಿ ಬೆಳೆಯಲು ತುಳುನಾಡಿನ ಜನತೆಯ ಪ್ರೋತ್ಸಾಹ ಸ್ಮರಣೀಯವಾದದ್ದು .ಕೊಂಕಣಿ ಸಾಹಿತ್ಯ,ಸಂಸ್ಕೃತಿ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಬೇಕು ಎಂದರು.
ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಜೆ.ಆರ್. ಲೋಬೋ ಮಾತನಾಡಿ ಜನಸಂಖ್ಯೆ ಹೆಚ್ಚಿದರೂ ಭಾಷೆಯನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ಬೆಳವಣಿಗೆ ಎಂದರು.
ಸಮ್ಮಾನ: ಮಂಗಳೂರಿನ ಮಾಂಡ್ ಸೊಭಾಣ್ (ರಿ) ಪರವಾಗಿ ಅಧ್ಯಕ್ಷ ಲೂವಿಸ್ ಜೆ.ಪಿಂಟೋ, ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರದ ಪರವಾಗಿ ಬಸ್ತಿ ವಾಮನ ಶೆಣೈ, ಯಕ್ಷಗಾನ ಕಲಾವಿದ ಮಿಜಾರು ಅಣ್ಣಪ್ಪ,ಗಿನ್ನೆಸ್ ದಾಖಲೆಯ ಈಜುಗಾರ ಗೋಪಾಲ ಖಾರ್ವಿ ,ಅವರನ್ನು ಸಮ್ಮಾನಿಸಲಾಯಿತು.
ಅತಿಥಿಗಳಾಗಿ , ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರುಗಳಾದ ಎರಿಕ್ ಒಝಾರಿಯೋ, ಕಾಸರಗೋಡು ಚಿನ್ನಾ, ಹಿರಿಯ ಸಾಹಿತಿ ನಾ.ಡಿ.ಸೋಜಾ, ಕುಡುಬಿ ಸಮಾಜ ಸಂಘದ ರಾಜ್ಯಾಧ್ಯಕ್ಷ ಎಂ.ರಾಮ ಗೌಡ, ಮೂಡುಬಿದಿರೆಯ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ , ಸಂಘಟಕ ಡಾ.ಎಂ. ಮೊಹನ ಆಳ್ವ ಹಾಗೂ ಮೂಡುಬಿದಿರೆ ವಲಯದ ವಿವಿಧ ಚರ್ಚ್ಗಳ ಧರ್ಮಗುರುಗಳು ಉಪಸ್ಥಿತರಿದ್ದರು.
ಎಲ್.ಜೆ.ಫೆನರ್ಾಂಡಿಸ್ ಸ್ವಾಗತಿಸಿ ಕೊಂಕಣಿ ಅಕಾಡೆಮಿಯ ರಿಜಿಸ್ಟ್ರಾರ್ ಡಾ.ದೇವದಾಸ ಪೈ ವಂದಿಸಿದರು. ಎಂದರು. ಮಾವಿನಕುರ್ವಿ ವೆಂಕಟೇಶ ಬಾಳಿಗಾ ಹಾಗೂ ಲಾಯ್ಡ್ ರೇಗೊ ಕಾರ್ಯಕ್ರಮ ನಿರ್ವಹಿಸಿದರು.
ಸಂಜೆ ಕೊಂಕಣಿ ಸಂಸ್ಕೃತಿಯ ದರ್ಶನ ರೂಪದ ಕಲಾವಿದರ ಮೆರವಣಿಗೆಯಲ್ಲಿ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ನೂರು ಕೊಂಕಣಿ ಗಾಯಕರಿಂದ ಸ್ವಾಗತಗೀತೆಯೊಂದಿಗೆ ಆರಂಭವಾದ ಕೊಂಕಣಿ ಸಿರಿಯಲ್ಲಿ ಸಭಾಕಲಾಪದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಡಪದವಿನ ಕುಡ್ಮಿ ಜಾನಪದ ಕಲಾವೇದಿಕೆಯಿಂದ ಕುಡ್ಮಿ ಗುಮ್ಟಾಂ ಮತ್ತು ಕೋಲಾಟ, ಭಟ್ಕಳದ ಖಾವರ್ಿ ಕಲಾಮಾಂಡ್ ವತಿಯಿಂದ ಖಾರ್ವಿ ಕಲಾ ಪ್ರದರ್ಶನ, ಮುಂಡಗೋಡದ ಸಿದ್ಧಿ ಕಲಾತಂಡದಿಂದ ಸಿದ್ಧಿ ಕಲಾ ಪ್ರದರ್ಶನ, ಶೀರೂರಿನ ನಾಕುದಾ ದಫ್ ಸಮಿತಿ ವತಿಯಿಂದ ದಾಲ್ದಿ-ದಫ್, ಕೊಂಕಣಿ ಸಾಂಸ್ಕೃತಿಕ ಸಂಘದಿಂಧ ಜಿ.ಎಸ್.ಬಿ. ಸಾಂಸ್ಕೃತಿಕ ಪ್ರದರ್ಶನ, ಕೊಂಕ್ಣಿ ಮ್ಹಜೊ ಫುಡಾರ್ -ಕಲಾಕುಲ್ ತಂಡದಿಂದ ಬೀದಿ ನಾಟಕ, ಮಂಗಳೂರಿನ ನಾಚ್ ಸೊಭಾಣ್ ವತಿಯಿಂದ ಕೊಂಕಣಿ ನೃತ್ಯ , ಕಾರ್ಕಳದ ಮಹಾಲಕ್ಷ್ಮೀ ಶೆಣೈಯವರಿಂದ ಹಾಡುಗಾರಿಕೆ , ಕೊಂಕ್ಣಿ ಸಂಗೀತ ಸೋಭಾಣ್ನಡೆಯಿತು.ಶೆಲ್ಡನ್ ಕ್ರಾಸ್ತಾ ಮತ್ತು ಕೆ.ಸ್ಮಿತಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.











