ಬಾಲ್ಯದಲ್ಲಿ ಸಂಸ್ಕಾರ ಕಲಿಸಿ- ಡಾ. ವಿಜಯ ಬಲ್ಲಾಳ್ ಕರ್ನಾಟಕ ಮಕ್ಕಳ ಸಮ್ಮೇಳನ ಉದ್ಘಾಟನೆ
ಉಡುಪಿ: ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ ಕಲಿಸಿ, ನಮ್ಮ ಪರಂಪರೆಯ ಬಗ್ಗ ಜ್ಞಾನ ನೀಡಿ ಎಂದು ಅಂಬಲಪಾಡಿ ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಾಲಯದ ಧರ್ಮದರ್ಶೀಗಳಾದ ಡಾ.ನಿ.ಬಿ ವಿಜಯ ಬಲ್ಲಾಳ ಅವರು ಹೇಳಿದರು.
ಅವರು ದೇವಾಲಯದ ಭವಾನಿ ಮಂಟಪದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಸರ್ವರ ಸಹಕಾರದೊಂದಿಗೆ ನಡೆಸಿದ ಕರ್ನಾಟಕ ಮಕ್ಕಳ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಉತ್ತಮ ಕೆಲಸ ಮಾಡುವವರನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ, ಶೇಖರ ಅಜೆಕಾರು ಅವರು ಯಾರು ಏನೇ ಹೇಳಿದರೂ ಅವರ ಆದಿಗ್ರಾಮೋತ್ಸವ, ಬೆಳದಿಂಗಳ ಸಮ್ಮೇಳನ, ಕವಿ ಸಮ್ಮಿಲನ, ಮಕ್ಕಳ ಮೇಳಗಳನ್ನು ತಮ್ಮ ಮಿತಿಯರಿತು ಮಾಡುತ್ತಿದ್ದಾರೆ. ಈ ಕಾರ್ಯಕ್ರಮ ಅವರ ಕ್ರಿಯಾಶೀಲತೆಗೆ ಸಾಕ್ಷಿ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಹೇಳಿದರು.
ಮಕ್ಕಳಿಗೆ ಬಾಲ್ಯದಲ್ಲಿಯೆ ಅವರ ಪ್ರತಿಭೆಗೆ ತಕ್ಕ ಅವಕಾಶ ದೊರೆತರೆ ಸಾಧನೆಯ ಹಾದಿಯಲ್ಲಿ ಮುನ್ನಡೆಯುವುದು ಸಾಧ್ಯ. ನನ್ನಂತ ನೂರಾರು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಡಾ.ಶೇಖರ ಅಜೆಕಾರು ಅವರಂತಹ ಹಿರಿಯರು ಪ್ರೋತ್ಸಾಹಿಸುತ್ತಿರುವುದು ಅಭಿಮಾನದ ಸಂಗತಿ ಎಂದು ಸಮ್ಮೇಳನದ ಸರ್ವಾಧ್ಯಕ್ಷೆ ಬಹುಮುಖ ಪ್ರತಿಭೆ ಅದ್ವಿಕಾ ಶೆಟ್ಟಿ ಹೇಳಿದರು.