ಸೆ.04 ಅಂಬಲಪಾಡಿಯಲ್ಲಿ ಕರ್ನಾಟಕ ಮಕ್ಕಳ ಸಮ್ಮೇಳನ ಅಧ್ಯಕ್ಷರಾಗಿ ಅದ್ವಿಕಾ ಶೆಟ್ಟಿ ಅಜೆಕಾರು
ಉಡುಪಿ : ಉಡುಪಿಯ ಅಂಬಲಪಾಡಿ ದೇವಾಲಯದ ಭವಾನಿ ಮಂಟಪದಲ್ಲಿ ಸೆ.04ರಂದು ಬೆಳಗ್ಗೆ 9.13 ರಿಂದ ನಡೆಯುವ ಒಂದು ದಿನದ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಹುಮುಖ ಪ್ರತಿಭೆಯ ಅದ್ವಿಕಾ ಶೆಟ್ಟಿ ಆಯ್ಕೆಯಾಗಿದ್ದಾರೆ.
ಯಕ್ಷಗಾನ, ನಟನೆ, ನೃತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅವರು ದ.ಕ ಜಿಲ್ಲಾ ರಾಜ್ಯೋತ್ಸವ ಸಹಿತ ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿದ್ದು ಅಂತಿಮ ಸುತ್ತಿನಲ್ಲಿ ಆಯ್ಕೆಯಾಗಿದ್ದಾರೆ ಎಂದು ಸಂಘಟಕ, ಹಿರಿಯ ಪತ್ರಕರ್ತ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ. ದೇವಾಲಯದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಅವರು ಹಿರಿಯ ಸಮಾಜ ಸೇವಕ ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸುವರು.
ಮಜಾಭಾರತ ಖ್ಯಾತಿಯ ಆರಾಧನಾ ಭಟ್ ನಿಡ್ಡೋಡಿ ಆಶಯ ಭಾಷಣ ಮಾಡುವರು. ಪ್ರಧಾನಮಂತ್ರಿ ಬಾಲಪುರಸ್ಕಾರ ಪಡೆದ ರೆಮೊನಾ ಇವೆಟ್ ಪಿರೇರಾ, ಯೋಗರತ್ನ ತನುಶ್ರೀ ಪಿತ್ರೋಡಿ, ತುಳುನಾಡ ಗಾನ ಕೋಗಿಲೆ ತನುಶ್ರೀ ಮಂಗಳೂರು, ನೃತ್ಯ ಪ್ರತಿಭೆ ಶೃಜನ್ಯ ಜೆ.ಕೆ, ವಾಗ್ಮಿ ಭಕ್ತಿಶ್ರೀ ಆಚಾರ್ಯ ಬೆಳುವಾಯಿ, ಸ್ಯಾಕ್ಸೋಪೋನ್ ಕಲಾವಿದ ಪ್ರೀತಮ್ ದೇವಾಡಿಗ ಮುದ್ರಾಡಿ, ತೃಷಾ ಎನ್.ಕೋಟ, ಶ್ರಾವಣ್ ಬಾಸ್ರಿ, ರೋಶನ್ ಗಿಳಿಯಾರು ಸಹಿತ 45 ಕ್ಕೂ ಹೆಚ್ಚು ಮಂದಿ ಬಾಲ ಪ್ರತಿಭೆಗಳು ಸಂಭ್ರಮಕ್ಕೆ ಕಳೆ ಕಟ್ಟಲಿರುವರು. ಸುಮಾರು 45 ಕ್ಕೂ ಹೆಚ್ಚು ಪ್ರತಿಭೆಗಳು ವೇದಿಕೆ ಹಂಚಿಕೊಳ್ಳಲಿರುವರು.
ಸಂಜೆ ಡಾ. ಹರಿಕೃಷ್ಣ ಪುನರೂರು, ಡಾ. ಶಿವರಾಮ ಶೆಟ್ಟಿ ತಲ್ಲೂರು, ಡಾ. ಆಕಾಶರಾಜ್, ಡಾ.ಗಣನಾಥ ಎಕ್ಕಾರು, ಚಿತ್ತರಂಜನ್ ಬೋಳಾರ್, ಹಫೀಜ್ ರೆಹಮಾನ್, ಪೂರ್ಣಿಮಾ , ಡಾ.ಶೇಖರ ಅಜೆಕಾರು, ಪ್ರಶಾಂತ್ ಕಾಮತ್ ಸಹಿತ ಗಣ್ಯರ ಉಪಸ್ಥಿತಿಯಲ್ಲಿ ಮಕ್ಕಳನ್ನು ಗೌರವಿಸಲಾಗುವುದು.