ಕೈಕಂಬ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯಾದ್ಯಂತ ಗ್ರಾಮ ಪಂಚಾಯತ್‌ಗಳ ಪ್ರತಿನಿತ್ಯದ ಕಾರ್ಯಚಟುವಟಿಕೆಯಲ್ಲಿ ನಾಗರಿಕ ಸೇವೆಗಳ ವಿಲೇವಾರಿಗೆ ೨೦೧೧ರ ಪಂಚತಂತ್ರ ತಂತ್ರಾಂಶ ಉನ್ನತೀಕರಿಸಿ, ಪಂಚತಂತ್ರ ೨.೦ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.
ಪಂಚತಂತ್ರ ೨.೦ ತಂತ್ರಾಂಶದ ‘ತೆರಿಗೆ ಸಂಗ್ರಹ ಮತ್ತು ನಾಗರಿಕ ಸೇವೆ’ಗಳ ಮಾಡ್ಯುಲ್ ಅಭಿವೃದ್ಧಿಪಡಿಸಲಾಗಿದ್ದು, ಈ ಮಾಡ್ಯುಲ್‌ಗಳು ಜುಲೈ ೬ರಿಂದ ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಅನುಷ್ಠಾನಗೊಂಡಿರುತ್ತದೆ. ಹೊಸ ವ್ಯವಸ್ಥೆಯಡಿ ಇನ್ನು ಮುಂದೆ ಪಂಚಾಯತ್ ಆಡಳಿತ ನಾಗರಿಕರಿಗೆ ಜಾರಿಗೊಳಿಸುವ ಎಲ್ಲ ಪರವಾನಿಗಳು(ಲೈಸೆನ್ಸ್) ಮಾನವಶ್ರಮದ ಬದಲಿಗೆ ಡಿಜಿಟಲ್ ಆನ್‌ಲೈನ್ ಮಾದರಿ ತಂತ್ರಾಂಶದಲ್ಲಿ ಇರುತ್ತದೆ.
ಎಲ್ಲ ಪಂಚಾಯತ್‌ಗಳಲ್ಲಿ ಬಾಪೂಜಿ ಸೇವಾ ಕೇಂದ್ರ ತಂತ್ರಾಂಶ ಮತ್ತು ಬಾಪೂಜಿ ಸೇವಾ ಕೆಂದ್ರ ಮೊಬೈಲ್ ಆ್ಯಪ್ ಮೂಲಕ ಆಸ್ತಿ ತೆರಿಗೆ ಪಾವತಿಸಲು ಹಾಗೂ ಇತರ ೧೫ ಸೇವೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕಟ್ಟಡ ನಿರ್ಮಾಣ ಲೈಸೆನ್ಸ್, ಸ್ವಾಧೀನ ಪತ್ರ, ಹೊಸ ನಲ್ಲಿ ನೀರಿನ ಸಂಪರ್ಕ, ಕುಡಿಯುವ ನೀರು ನಿರ್ವಹಣೆ, ಬೀದಿ ದೀಪ ನಿರ್ವಹಣೆ, ಗ್ರಾಮ ನೈರ್ಮಲ್ಯದ ನಿರ್ವಹಣೆ, ನಮೂನೆ ೧೧ಬಿ, ವಾಣಿಜ್ಯ-ವ್ಯಾಪಾರ-ವಸತಿಯೇತರ ವ್ಯವಹಾರದ ಲೈಸೆನ್ಸ್, ಕೈಗಾರಿಕೆ-ಕೃಷಿ ಆಧರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ, ನಿರಪೇಕ್ಷಣಾ ಪತ್ರ, ರಸ್ತೆ ಅಗೆತದ ಅನುಮತಿ, ಕೌಶಲ್ಯರಹಿತ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು ಮತ್ತು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(ನರೇಗಾ) ಅಡಿಯಲ್ಲಿ ಕೌಶಲ್ಯರಹಿತ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ ವ್ಯವಹಾರವು ಬಾಪೂಜಿ ಸೇವಾ ಕೇಂದ್ರ ಮೊಬೈಲ್ ಆ್ಯಪ್‌ನಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಎಲ್ಲ ಪಂಚಾಯತ್‌ಗಳಿಗೆ ಅನ್ವಯವಾಗುವ ಈ ಮಾಹಿತಿಯನ್ನು ಗುರುಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅಬೂಬಕ್ಕರ್ ನೀಡಿದ್ದಾರೆ.
